

ಬೆಳಗಾವಿ: ವಿಶ್ವ ಪರಿಸರ ದಿನದ ಅಂಗವಾಗಿ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮತ್ತು ಕಾಳಜಿ ಬೆಳೆಸುವ ಉದ್ದೇಶದಿಂದ ರಾಜ್ಯದ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ವತಿಯಿಂದ ಕೆಎಲ್‌ಇ ಸಂಸ್ಥೆಯ ಲಿಂಗರಾಜು ಕಾಲೇಜು ಆವರಣದಲ್ಲಿ ಜೂ.7ರಂದು ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ಪ್ರತಿವರ್ಷದಂತೆ ಈ ಬಾರಿ ವಿಜಯವಾಣಿ ಪತ್ರಿಕೆಯು ಕೆಎಲ್‌ಇ ಸಂಸ್ಥೆ, ಅರಣ್ಯ ಇಲಾಖೆ ಹಾಗೂ ಜಯಭಾರತ ೌಂಡೇಶನ್ ಸಹಯೋಗದಲ್ಲಿ ಮೂರು ವಿಭಾಗದಲ್ಲಿ ವಿಶ್ವ ಪರಿಸರ ದಿನದ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸ ಲಾಗಿದೆ. ವಿಭಾಗ-1ರಲ್ಲಿ (5 ರಿಂದ 7ನೇ ತರಗತಿ ವಿದ್ಯಾರ್ಥಿಗಳು), ವಿಭಾಗ-2ರಲ್ಲಿ (8 ರಿಂದ 10ನೇ ತರಗತಿ ವಿದ್ಯಾರ್ಥಿಗಳು) ಹಾಗೂ ವಿಭಾಗ-3ರಲ್ಲಿ ಪಿಯುಸಿ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದಾಗಿದೆ.
ಮೂರು ವಿಭಾಗಗಳಲ್ಲಿ ಹಮ್ಮಿಕೊಂಡಿರುವ ಸ್ಪರ್ಧೆಯಲ್ಲಿ ಭಾಗ-1ರಲ್ಲಿ ನಮ್ಮ ಪರಿಸರ, ವಿಭಾಗ-2ರಲ್ಲಿ ಪರಿಸರ ಸಂರಕ್ಷಣೆ ಹಾಗೂ ವಿಭಾಗ-3ರಲ್ಲಿ ಜಾಗತಿಕ ತಾಪಮಾನ ವಿಷಯ ಕುರಿತು ಚಿತ್ರ ಬಿಡಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರಥಮ ಬಹುಮಾನ 3000 ರೂ., ದ್ವಿತೀಯ ಬಹುಮಾನ 2000 ರೂ. ಹಾಗೂ ತೃತೀಯ ಬಹುಮಾನ 1 ಸಾವಿರ ರೂ. ನಗದು ಬಹುಮಾನ ನೀಡಲಾಗುತ್ತಿದೆ. ಭಾಗವಹಿಸಿದ ಎಲ್ಲರಿಗೂ ಪ್ರಶಂಸಾ ಪತ್ರ ನೀಡಿ ಗೌರವಿಸಲಾಗುತ್ತಿದೆ.
ಸೂಚನೆಗಳು: ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳು ಓದುತ್ತಿರುವ ಶಾಲೆ ಗುರುತಿನ ಚೀಟಿ (ಐಡಿ ಕಾರ್ಡ್) ಅಥವಾ ಅಧಿಕೃತ ಗುರುತಿನ ಚೀಟಿ ಹಾಗೂ ಎರಡು ಪಾಸ್‌ಪೋರ್ಟ್ ಸೈಜ್ ಪೋಟೋ ಕಡ್ಡಾಯವಾಗಿ ತೆಗೆದುಕೊಂಡು ಬರಬೇಕು. ಡ್ರಾಯಿಂಗ್ ಶೀಟ್‌ಗಳನ್ನು ಆಯೋಜಕರೇ ಕೊಡುತ್ತಾರೆ. ಪ್ಯಾಡ್, ಪೆನ್ಸಿಲ್, ಸ್ಕೆಚ್‌ಪೆನ್, ಸ್ಕೇಲ್ ಸೇರಿ ಇತರ ಬರವಣಿಗೆ ಸಾಮಗ್ರಿಗಳನ್ನು ವಿದ್ಯಾರ್ಥಿಗಳೇ ತರಬೇಕು. ಚಿತ್ರವನ್ನು ಪೂರ್ಣ ಪ್ರಮಾಣದಲ್ಲಿ ಬಿಡಿಸಿರಬೇಕು. ಕೊಟ್ಟಿರುವ ಸ್ಪರ್ಧಾ ವಿಷಯ ಬಿಟ್ಟು ಬೇರೆ ಚಿತ್ರ ಬಿಡಸಬಾರದು. ತೀರ್ಪುಗಾರರ ನಿರ್ಣಯವೇ ಅಂತಿಮ.
ಉಚಿತ ನೋಂದಣಿ: ವಿಶ್ವ ಪರಿಸರ ಅಂಗವಾಗಿ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತರು ಮೊ.ನಂ.8884432467, 9741589405, 8884432338 ಸಂಖ್ಯೆಗೆ ಕರೆ ಮಾಡಿ ಹೆಸರು ನೋಂದಾಯಿಸಬಹುದು. ಅಲ್ಲದೇ, ಜೂ.7ರಂದು ಮಧ್ಯಾಹ್ನ 1ರಿಂದ ಸ್ಥಳದಲ್ಲಿಯೇ ನೋಂದಣಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಮಧ್ಯಾಹ್ನ 2.30ಗಂಟೆಗೆ ಸ್ಪರ್ಧೆ ಆರಂಭಗೊಳ್ಳಲಿದೆ.