

ಹಾಸನ : ಲೋಕಸಭೆ ಚುನಾವಣೆ ಮತ ಎಣಿಕೆ ಜೂ.4 ರಂದು ಬೆಳಗ್ಗೆ 8 ಗಂಟೆಯಿಂದ ನಗರದ ಸರ್ಕಾರಿ ಇಂಜಿನೀಯರಿಂಗ್ ಕಾಲೇಜಿನಲ್ಲಿ ಆರಂಭವಾಗಲಿದ್ದು,ಇದಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸಿ.ಸತ್ಯಭಾಮಾ ಅವರು ತಿಳಿಸಿದರು.
ಮತ ಯಂತ್ರಗಳನ್ನು ಇಂಜಿನೀಯರಿಂಗ್ ಕಾಲೇಜಿನ ಸ್ಟ್ರಾಂಗ್‌ರೂಂನಲ್ಲಿ ಶೇಖರಿಸಿರುವ ದ್ರತಾ ಕೊಠಡಿ ಬಾಗಿಲುನ್ನು ಬೆಳಿಗ್ಗೆ 7 ಗಂಟೆಗೆ ಅಧಿಕಾರಿಗಳು ಮತ್ತು ವೀಕ್ಷಕರ ಸಮಕ್ಷಮದಲ್ಲಿ ತೆರೆಯಲಾಗುವುದು. 8 ಗಂಟೆಯಿಂದ ಅಂಚೆ ಮತಪತ್ರಗಳ ಎಣಿಕ ಪ್ರಾರಂಭವಾಗುವುದು. ಬಳಿಕ ಮತಯಂತ್ರಗಳಿಂದ ಎಣಿಕಾ ಕಾರ್ಯ ನಡೆಯಲಿದೆ. ಪ್ರತಿ ಸುತ್ತು ಎಣಿಕೆ ವಿವರವನ್ನು ಮೈಕ್ ಮೂಲಕ ಪ್ರಚಾರ ಪಡಿಸಲಾಗುವುದು ಎಂದು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಾಸನ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಿಗೂ ಪ್ರತಿ ಕ್ಷೇತ್ರಕ್ಕೂ 14 ಟೇಬಲ್‌ಗಳನ್ನು ನಿಗದಿಪಡಿಸಲಾಗಿದೆ. ಅಂಚೆಮತ ಎಣಿಕೆಗೂ ಸೇರಿ ಒಟ್ಟು 126 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಶ್ರವಣಬೆಳಗೊಳ ಕ್ಷೇತ್ರದಲ್ಲಿ ಒಟ್ಟು 263 ಮತಗಟ್ಟೆಗಳಿದ್ದು, 19 ಸುತ್ತಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಅರಸೀಕೆರೆಯಲ್ಲಿ 267 ಮತಗಟ್ಟೆಗಳಿದ್ದು, 20 ಸುತ್ತು. ಬೇಲೂರು ಕ್ಷೇತ್ರದಲ್ಲಿ 270 ಮತಗಟ್ಟೆಗಳಿದ್ದು, 20 ಸುತ್ತು. ಹಾಸನದಲ್ಲಿ 275 ಮತಗಟ್ಟೆಗಳಿದ್ದು, 20 ಸುತ್ತು. ಹೊಳೆನರಸೀಪುರದಲ್ಲಿ 325 ಮತಗಟ್ಟೆಗಳಿದ್ದು, 24 ಸುತ್ತಿನಲ್ಲಿ ಎಣಿಕೆ ನಡೆಯಲಿದೆ. ಅರಕಲಗೂಡಿನಲ್ಲಿ 283 ಮತಗಟ್ಟೆಗಳಿದ್ದು, 21 ಸುತ್ತು. ಸಕಲೇಶಪುರದಲ್ಲಿ 285 ಮತಗಟ್ಟೆಗಳಿದ್ದು 21 ಸುತ್ತು, ಕಡೂರು ಕ್ಷೇತ್ರದಲ್ಲಿ 253 ಕ್ಷೇತ್ರಗಳಿದ್ದು, 19 ಸುತ್ತಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ವಿವರಿಸಿದರು.
ಅಂಚೆ ಪತ್ರಗಳ ಇಟಿಪಿಬಿಎಂಎಸ್ ಸ್ಕಾೃನಿಂಗ್‌ಗೆ ನಾಲ್ಕು ಟೇಬಲ್, ಎಣಿಕೆಗೆ ಪ್ರತ್ಯೇಕ 10 ಟೇಬಲ್‌ಗಳನ್ನು ನಿಗದಿಪಡಿಸಲಾಗಿದೆ. ಚುನಾವಣಾ ಅಧಿಕೃತ ಏಜೆಂಟಗಳಿಗೆ ವಿಧಾನಸಭಾ ಕ್ಷೇತ್ರವಾರು ಪ್ರತ್ಯೇಕ ಬಣ್ಣದ ಗುರುತಿನ ಚೀಟಿಯನ್ನು ಒದಗಿಸಲಾಗುವುದು. ಮತ ಎಣಿಕೆ ಕೇಂದ್ರಕ್ಕೆ ಬರುವ ಅಭ್ಯರ್ಥಿಗಳು ಮತ್ತು ಏಜೆಂಟರ್‌ಗಳಿಗೆ ಡೇರಿ ವೃತ್ತದ ದಕ್ಷಿಣ ಭಾಗದ ಮುಖ್ಯಪ್ರವೇಶ ದ್ವಾರದ ಮೂಲಕ ಆಗಮಿಸಬೇಕು. ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾದ ಅಧಿಕಾರಿಗಳು, ಸಿಬ್ಬಂದಿ ರಿಂಗ್ ರಸ್ತೆಗೆ ಪ್ರವೇಶವಾಗುವ ಪೂರ್ವ ಭಾಗದ ಮುಖ್ಯ ಪ್ರವೇಶ ದ್ವಾರದ ಮೂಲಕ ಅವಕಾಶ ಕಲ್ಪಿಸಲಾಗಿದೆ. ವಾಹನಗಳ ಪಾಕಿರ್ಂಗ್‌ಗೆ ನಗರದ ಎಲ್.ವಿ. ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಪ್ರತ್ಯೇಕ ಬಣ್ಣದ ಪಾಸ್‌ಗಳನ್ನು ನೀಡಲಾಗುವುದು. ಏಜೆಂಟರು ತಮಗೆ ನಿಗದಿಪಡಿಸಿದ ಟೇಬಲ್ ಮತ್ತು ಕ್ಷೇತ್ರಕ್ಕೆ ನಿಗದಿಪಡಿಸಿರುವ ಕೌಂಟಿಂಗ್ ಕೊಠಡಿಯನ್ನು ಬಿಟ್ಟು ಬೇರೆ ಬೇರೆ ಕಡೆಗೆ ಹೋಗುವಂತಿಲ್ಲ. ಹಾಗೆಯೇ ಬೇರೆ ಕ್ಷೇತ್ರದ ಎಣಿಕಾ ಕೊಠಡಿಗೆ ಪ್ರವೇಶಿಸಿದಲ್ಲಿ ಯಾವುದೇ ಮುನ್ಸೂಚನೆ ನೀಡದೆ ಹೊರಗೆ ಹಾಕಲಾಗುವುದು ಎಂದು ತಿಳಿಸಿದರು.
ಮೊಬೈಲ್ ಬಳಿಕೆ ನಿಷೇಧ:
ಎಣಿಕಾ ಕೆಂದ್ರಕ್ಕೆ ಕಡ್ಡಾಯವಾಗಿ ಮೊಬೈಲ್, ನೀರಿನ ಬಾಟಲ್ ಸೇರಿ ಇತರೆ ಯಾವುದೇ ವಸ್ತುಗಳನ್ನು ತರುವಂತ್ತಿಲ್ಲ. ಎಣಿಕಾ ಕಾರ್ಯದ ಎಲ್ಲಾ ಪ್ರಕ್ರಿಯೆ ಸಿಸಿಟಿವಿ ಕಣ್ಗಾವಲಿನಲ್ಲಿ ನಡೆಯಲಿದೆ. ಸುಕ್ತ ಭದ್ರತೆ ವ್ಯವಸ್ಥೆಯನ್ನು ಒದಗಿಸಲಾಗಿದೆ. ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮತ ಎಣಿಕೆ ಮುಖ್ಯ ಪ್ರವೇಶದ್ವಾರದ ಬಳಿ ಮೊಬೈಲ್ ಡೆಪಾಸಿಷನ್ ಕೇಂದ್ರ ತೆರೆಯಲಾಗಿದ್ದು, ಅಲ್ಲೇ ಇಟ್ಟು ಹೋಗಬೇಕು. ಮೊಬೈಲ್ ಒಂದು ಬಾರಿ ವಾಪಾಸ್ ಪಡೆದುಕೊಂಡು ಹೊರಭಾಗಕ್ಕೆ ತೆರಳಿದ ನಂತರ ಪುನಃ ಒಳಗೆ ಬರಲು ಅವಕಾಶ ಕಲ್ಪಿಸಲಾಗುವುದಿಲ್ಲ. ಎಜೆಂಟರ್ ಸಾಮಾನ್ಯ ಪೆನ್ ಹಾಗು ಪ್ಯಾಡ್ ಮಾತ್ರ ಕೊಠಡಿಯೊಳಗೆ ತೆಗೆದುಕೊಂಡು ಹೋಗಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜಿತಾ, ಅಪಾರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ ಇದ್ದರು.