ಜೂ.20 ರಿಂದ ದಿವ್ಯಾಂಗರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಜೂ.20 ರಿಂದ ದಿವ್ಯಾಂಗರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ
Published on

ಹಾಸನ: ನಗರದ ರಾಜೀವ್ ಆಯುರ್ವೇದ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ ಜೂ.20 ರಿಂದ ಮೂರು ದಿನಗಳಕಾಲ ಬೆನ್ನುಹುರಿ ಅಪಘಾತಕ್ಕೆ ಒಳಗಾದ ದಿವ್ಯಾಂಗರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಗಾಲಿ ಕುರ್ಚಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಸೇವಭಾರತಿ ವ್ಯವಸ್ಥಾಪಕ ಚರಣ್ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಕನ್ಯಾಡಿಯ ಸೇವಾಭಾರತಿ, ಹಾಸನ ಜಿಲ್ಲೆಯ ಸೇವಾಧಾಮ ಹಾಗೂ ಬೆಂಗಳೂರಿನ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೈಬಿಲಿಟಿ ಇವರ ಆಶ್ರಯದಲ್ಲಿ ಶಿಬಿರ ನಡೆಯಲಿದ್ದು ಜೂ.20 ರಂದು ಬೆಳಗ್ಗೆ 11 ಗಂಟೆಗೆ ಡಿಎಚ್‌ಒ. ಡಾ.ಬಿ.ಎನ್.ಶಿವಸ್ವಾಮಿ ಅವರು ಆರೋಗ್ಯ ತಪಾಸಣೆ ಮತ್ತು ಜಾಗೃತಿ ಶಿಬಿರ ಉದ್ಘಾಟಿಸುವರು.ಸೇವಾಭಾರತಿ ಕಾರ್ಯದರ್ಶಿ ಬಾಲಕೃಷ್ಣ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ರಾಜೀವ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಬಿ.ಎಸ್.ರತ್ನ, ಹಿಮ್ಸ್ ನಿರ್ದೇಶಕ ಡಾ.ಎಸ್.ವಿ.ಸಂತೋಷ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಚ್.ಸಿ.ಲೋಕೇಶ್, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಕೆ.ಆರ್.ಅನುಪಮಾ, ಬೆಂಗಳೂರಿನ ಡಾ.ಶಾರೋನ್ ಮ್ಯಾಥಿವ್, ಸೇವಾಭಾರತಿ ಸಲಹಾಸಮಿತಿ ಸದಸ್ಯ ಡಾ.ಎ.ಜಯಕುಮಾರ್ ಶೆಟ್ಟಿ ಉಪಸ್ಥಿತರಿರುವರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜೂ.22 ರಂದು ಬೆಳಗ್ಗೆ 9.30ಕ್ಕೆ ಮಹಾರಾಜ ಪಾರ್ಕ್ ಉದ್ಯಾನವನದ ಮುಂಭಾಗದಿಂದ ಗಾಲಿ ಕುರ್ಚಿ ಜಾಥಾ ಆರಂಭವಾಗಿ ಆರ್.ಸಿ.ರಸ್ತೆ ಮೂಲಕ ಸಾಗಿ ಎನ್.ಆರ್.ವೃತ್ತದವರೆಗೆ ನಡೆಯಲಿದೆ. ಹಾಸಿಗೆ ಹಿಡಿದ ಬೆನ್ನುಹುರಿ ಅಪಘಾತಕ್ಕೆ ಒಳಗಾದ ದಿವ್ಯಾಂಗರನ್ನು ಮುಖ್ಯವಾಹಿನಿಗೆ ಬರುವಂತೆ ಮಾಡಿ ಅವರಿಗೆ ಎಲ್ಲರಂತೆ ಬದುಕಲು ಧೈರ್ಯ ತುಂಬುವುದರ ಜೊತೆಗೆ ಜನ ಸಾಮಾನ್ಯರಿಗೆ ಬೆನ್ನುಹುರಿ ಅಪಘಾತದ ಬಗ್ಗೆ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶ ಎಂದರು.
ಜಾಗೃತಿ ಕಾರ್ಯಾಗಾರದಿಂದ ಬೆನ್ನುಹುರಿ ಅಪಘಾತದ ದಿವ್ಯಾಂಗರನ್ನು ಗುರುತಿಸಲು ಸಹಕಾರಿಯಾಗಲಿದೆ ಎಂದರು. ಮಧ್ಯಾಹ್ನ 12 ಗಂಟೆಗೆ ಸಮಾರೋಪ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ರಾಜೀವ್ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಸ್.ಎ.ನಿತಿನ್ ಆಗಮಿಸುವರು. ಸ್ಫೂರ್ತಿದಾಯಕ ಭಾಷಣಕಾರರು ಹಾಗೂ ರಿಬೌಂಡ್ ಕೋಚ್ ನಿರಂಜನ ನೇರ್ಲಿಗೆ ಭಾಗಿಯಾಗುವರು ಎಂದರು.
2004 ರಲ್ಲಿ ಸ್ಥಾಪಿತವಾದ ಸೇವಭಾರತಿ, ಅಂದಿನಿಂದ ಮಹಿಳಾ ಸಬಲೀಕರಣ, ಸ್ವ-ಉದ್ಯೋಗದ ಮೂಲಕ ದಿವ್ಯಾಂಗರ ಕ್ಷೇತ್ರದಲ್ಲಿ ಸಾಮಾಜಿಕ ಸೇವಾಕಾರ್ಯ ಹಾಗೂ ಸಮುದಾಯ ಸೇವೆ ಮಾಡಿಕೊಂಡು ಬರುತ್ತಿದೆ. 2018 ರಲ್ಲಿ ಬೆನ್ನುಹುರಿ ಅಪಾತಕ್ಕೊಳಗಾದವರಿಗೆ ಪುನಶ್ಚೇತನ ಕೇಂದ್ರ ಆರಂಭಿಸಿ, ಪುನಶ್ಚೇತನ ನೀಡುವ ಕಾರ್ಯವನ್ನು ನಿರಂತರವಾಗಿ ನಮ್ಮ ಸಂಸ್ಥೆ ಮಾಡುತ್ತಾ ಬರುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘಟನಾ ಕಾರ್ಯದರ್ಶಿ ಗಿರೀಶ್, ಮಂಜುನಾಥ್, ನಾಗಾರ್ಜುನ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net