ಜೂ. 19ರಂದು ಹಾಸನಾಂಬ ಕಲಾಕ್ಷೇತ್ರದಲ್ಲಿ ಗೋರ್ ಮಾಟಿ’ ನಾಟಕ

ಜೂ. 19ರಂದು ಹಾಸನಾಂಬ ಕಲಾಕ್ಷೇತ್ರದಲ್ಲಿ ಗೋರ್ ಮಾಟಿ’ ನಾಟಕ
Published on

ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜೂ. 19ರ ಬುಧವಾರ ಸಂಜೆ 6 ಗಂಟೆಗೆ ಬಂಜಾರ ಜನಾಂಗದ ಕಲೆ, ಸಂಸ್ಕೃತಿ ಬದುಕು ಬವಣೆಗಳನ್ನು ಬಿಂಬಿಸುವ ‘ಗೋರ್ ಮಾಟಿ’ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಂಗ ಸಂಘಟಕ ಹಾಗೂ ಹಿರಿಯ ಪತ್ರಕರ್ತ ಚಲಂ ಹಾಡ್ಲಹಳ್ಳಿ ತಿಳಿಸಿದರು.
ಉಲಿವಾಲ ಸ್ಕೂಲ್ ಆಫ್ ಡ್ರಾಮಾ ವತಿಯಿಂದ ಆಯೋಜಿಸಿರುವ ಈ ನಾಟಕ, ಬುಡಕಟ್ಟು ಸಮುದಾಯದ ಜೀವನ ಶೈಲಿ ಹಾಗೂ ವೈಶಿಷ್ಟ್ಯದ ಮಾಹಿತಿ ಒಳಗೊಂಡಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಬಂಜಾರ ಸಮುದಾಯದ ಕೊಡುಗೆ ಹಾಗೂ ದೇಶಕ್ಕೆ ಅವರ ಹಾಗೂ ಅವರಿಂದ ಆಗಿರುವ ಅನುಕೂಲಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ ಈ ನಾಟಕ ಆಯೋಜಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
30 ಜನ ಕಲಾವಿದರನ್ನೊಳಗೊಂಡ ನಾಟಕ ಇದಾಗಿದ್ದು, ಎರಡೂವರೆ ಗಂಟೆಗಳ ಕಾಲ ನಾಟಕ ಪ್ರದರ್ಶನ ನಡೆಯಲಿದೆ. ಸಿ.ಬಸಲಿಂಗಯ್ಯ ಅವರು ನಿರ್ದೇಶನ ಮಾಡಿದ್ದು, ಗೀತ ಮೊಂಟಡ್ಕ ಅವರು ರಂಗ ನಿರ್ವಹಣೆ ಮಾಡಿದ್ದಾರೆ. ನಂದಿನಿ ಕೆ.ಆರ್. ಅವರ ಸಹ ನಿರ್ದೇಶನ ಇದ್ದು, ಬೆಳಕಿನ ವಿನ್ಯಾಸ ಕೃಷ್ಣಕುಮಾರ್ ನಾರ್ಣಕಜೆ, ರಂಗರೂಪ, ಶಿರಗಾನಹಳ್ಳಿ ಶಾಂತನಾಯಕ್, ರಂಗವಿನ್ಯಾಸ, ಶಶಿಧರ್ ಅಡಪ ಮಾಡಿದ್ದಾರೆ. ವಸ್ತ್ರ ವಿನ್ಯಾಸವನ್ನು ಪ್ರಮೋದ್ ಶಿಗ್ಗಾಂವ್, ಶಶಿಕಲಾ ಬಿ.ಎಸ್. ಮಾಡಿದ್ದಾರೆ ಎಂದು ವಿವರಿಸಿದರು.
ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಬಂಜಾರ ಸಮುದಾಯ ಇದೆ. ಈ ಸಮುದಾಯದ ಸಾಂಸ್ಕೃತಿಕ ಕಥಾನಕವನು ಈ ನಾಟಕ ತಿಳಿಸಲಿದೆ. ಇದನ್ನ ಕರ್ನಾಟಕದಲ್ಲಿ ಲಂಬಾಣಿ ಎಂದು ಕರೆಯುತ್ತೇವೆ. ಬುಡಕಟ್ಟು ಸಮಾಜದ ಈ ಕಥೆ ಅದ್ಭುತವಾಗಿ ನಾಟಕದಲ್ಲಿ ಮೂಡಿ ಬಂದಿದೆ. ಸಾಹಿತಿ ಹಾಗೂ ಮಾಜಿ ಸಚಿವರಾದ ಬಿ.ಟಿ. ಲಲಿತಾನಾಯಕ್ ಅವರ ತಾಂಡಾಯಣ ಮತ್ತು ಇನ್ನೊಂದು ಕಥೆ ಸೇರಿ ಎರಡು ಕಥೆಯ ಆಯ್ಧ ಭಾಗಗಳನ್ನು 30 ಸಾವಿರ ಇತಿಹಾಸವಿರುವ ಬಂಜಾರ ಸಮುದಾಯ ಸ್ವಾತಂತ್ರ್ಯದ ವೇಳೆ ಇವರ ಕೊಡುಗೆ ಏನು ಎಂಬ ಇತಿಹಾಸವನ್ನು ನಾಟಕ ಹೇಳಲಿದೆ ಎಂದರು.
ಮೈಸೂರಿನ ರಂಗಾಯಣ ರೆಪರ್ಟರಿ ಪ್ರಯೋಗಿಸುವ ಅಪರೂಪದ ನಾಟಕ ಪ್ರದರ್ಶನಕ್ಕೆ ಕಲಾ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಾಟಕ ಪ್ರದರ್ಶನ ಯಶಸ್ವಿ ಗೊಳಿಸಬೇಕು ಎಂದು ಮನವಿ ಮಾಡಿದರು. ಇದು ಬರೀ ನಾಟಕ ಅಲ್ಲ, ಬಂಜಾರ ಜನಾಂಗದ ಕಲೆ, ಸಂಸ್ಕೃತಿ ಬದುಕು ಬವಣೆಗಳ ಸಂಕಥನ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಂಗಕರ್ಮಿ ರತಿ, ರಾಮಗಿರಿ ನಾಯಕ್, ಪುಟ್ಟನಾಯಕ್, ಜಗದೀಶ್, ಸೋಮನಾಯಕ್, ಪರಮೇಶ್ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net