ಜೂ. 19 ಹಾಗೂ 20 ರಂದು ಜಿಲ್ಲೆ ಸಂಪೂರ್ಣ ಲಾಕ್ - ಡಿಸಿ ಹಿರೇಮಠ

Lockdown
Published on

ಬೆಳಗಾವಿ: ಜಿಲ್ಲೆಯಲ್ಲಿ ಕರೊನಾ ವೈರಸ್ ಸೋಂಕು ಹರಡದಂತೆ ತಡೆಗಟ್ಟಲು ಜೂ. 19ರ ಬೆಳಗ್ಗೆ 6ರಿಂದ ಜೂ. 21 ಬೆಳಗ್ಗೆ 6 ಗಂಟೆವರೆಗೆ ಸಂಪೂರ್ಣ ಲಾಕ್‌ಡೌನ್ ಘೋಷಿಸಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ.

ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಸಂಚರಿಸಲು, ಅಗತ್ಯ ವಸ್ತುಗಳಾದ ಹಾಲು, ಔಷಧ ಪೂರೈಕೆ ಮತ್ತು ಖರೀದಿಗೆ ಹಾಗೂ ಆನ್‌ಲೈನ್ ಫುಡ್ ಸರ್ವಿಸ್‌ಗಳಿಗೆ ಅವಕಾಶ ನೀಡಲಾಗಿದೆ. ಅಲ್ಲದೆ, ಸರ್ಕಾರಿ ಅಧಿಕಾರಿಗಳಿಗೆ ಸರ್ಕಾರಿ ಸಭೆಗೆ ಹಾಜರಾಗಲು ಅವಕಾಶ ನೀಡಲಾಗಿದೆ. ಲಾಕ್‌ಡೌನ್ ಷೋಷಿಸಿರುವ ದಿನಗಳಂದು ಸಾರ್ವಜನಿಕ ವಿತರಣಾ ಪದ್ಧತಿಯಡಿ ಬರುವ ನ್ಯಾಯಬೆಲೆ ಅಂಗಡಿಗಳು ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 10 ಗಂಟೆವರೆಗೆ ಮಾತ್ರ ಕಾರ್ಯ ನಿರ್ವಹಿಸಲಿವೆ.

ಗೊಬ್ಬರ ಖರೀದಿಗೆ ಅವಕಾಶ: ರೈತ ಸಂಪರ್ಕ ಕೇಂದ್ರ ಹಾಗೂ ಹೆಚ್ಚುವರಿ ಮಳಿಗೆಗಳು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಅಂಗಡಿಗಳನ್ನು ತೆರೆದು ಬೀಜ ಹಾಗೂ ರಸಗೊಬ್ಬರ ವಿತರಿಸಲು ಅವಕಾಶವಿರುತ್ತದೆ. ಪ್ರತಿ ಗ್ರಾಮದಿಂದ 5 ಜನರಿಗೆ ರೈತ ಸಂಪರ್ಕ ಕೇಂದ್ರ ಹಾಗೂ ಹೆಚ್ಚುವರಿ ಮಳಿಗೆಗಳಿಗೆ ಹೋಗಲು ಅವಕಾಶವಿರುತ್ತದೆ.

ಬೆಳಗಾವಿ ನಗರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಇತರ ಪರಿಕರಗಳ ಮಾರಾಟ ಮಳಿಗೆಗಳನ್ನು ಲಾಕ್‌ಡೌನ್ ದಿನಗಳಂದು ಮಧ್ಯಾಹ್ನ 12 ಗಂಟೆವರೆಗೆ ತೆರೆಯಲು ಅವಕಾಶವಿದ್ದು, ಅಲ್ಲಿ ತೆರಳುವ ರೈತರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮಲೆಕ್ಕಿಗರ ಅನುಮತಿಪಡೆಯಬೇಕು ಎಂದು ತಿಳಿಸಿದ್ದಾರೆ.

ಕ್ರಮದ ಎಚ್ಚರಿಕೆ: ಆದೇಶದಲ್ಲಿ ಸೂಚಿಸಿರುವ ದಿನಗಳಂದು ಈಗಾಗಲೇ ಪೂರ್ವಾನುಮತಿ ಪಡೆದುಕೊಂಡು ನಿಗದಿಪಡಿಸಿರುವ ಮದುವೆ ಸಮಾರಂಭಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಸಂಪೂರ್ಣ ಲಾಕ್‌ಡೌನ್ ಆದೇಶ ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆ 188ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಡಿಸಿ ಹಿರೇಮಠ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net