ಜೂ.13ರಂದು ಧರಣಿ ಬಳಿಕ ಜಿಲ್ಲೆ ಬಂದ್‌ಗೆ ತೀರ್ಮಾನ

10Rajesh8
Published on

ಚಾಮರಾಜನಗರ: ಆರ್‌ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತದಿಂದ ಜೀವ ಕಳೆದುಕೊಂಡವರಿಗೆ 25 ಲಕ್ಷ ರೂ. ಪರಿಹಾರ ನೀಡಿ, ಆಕ್ಸಿಜನ್ ದುರಂತದ ಸಂತ್ರಸ್ತರಿಗೆ ಮಾತ್ರ ಸೂಕ್ತ ಪರಿಹಾರ, ನ್ಯಾಯ ಒದಗಿಸಿಕೊಡದೆ ಇರುವುದನ್ನು ಖಂಡಿಸಿ ಜೂ.13ರಂದು ಡಿಸಿ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ರಾಜ್ಯ ಸರ್ಕಾರಕ್ಕೆ ಒಂದು ತಿಂಗಳ ಕಾಲಾವಕಾಶ ನೀಡಿ ಕಾಲಮಿತಿಯೊಳಗೆ ನ್ಯಾಯ ದೊರಕಿಸಿಕೊಡದಿದ್ದರೆ ಜಿಲ್ಲಾದ್ಯಂತ ಬಂದ್‌ಗೆ ಕರೆ ನೀಡಲು ತೀರ್ಮಾನಿಸಲಾಯಿತು.

ನಗರದ ಪ್ರವಾಸಿ ಮಂದಿರದಲ್ಲಿ ವಿವಿಧ ಪ್ರಗತಿ ಪರ ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರ ಕರೆದಿದ್ದ ಸಭೆಯಲ್ಲಿ ಆಕ್ಸಿಜನ್ ದುರಂತದ ಸಂತ್ರಸ್ತರ ಪರವಾಗಿ ಹೋರಾಟ ನಡೆಸಲು ಚರ್ಚೆ ನಡೆಸಲಾಯಿತು. ಇದಾದ ಬಳಿಕ ಪ್ರಗತಿ ಪರ ಹೋರಾಟಗಾರ ಸಿ.ಎಂ.ಕೃಷ್ಣಮೂರ್ತಿ ಮಾತನಾಡಿ, ಜಿಲ್ಲೆಯಲ್ಲಿ ಆಗಿರುವ ಈ ದೊಡ್ಡ ದುರಂತಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ತೀರ್ಮಾನ ತೆಗೆದುಕೊಂಡಿದ್ದೇವೆ. ಜೂ.13ರಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಅಂತಿಮವಾಗಿ ಮನವಿ ಸಲ್ಲಿಸಲಿದ್ದೇವೆ. ಒಂದು ತಿಂಗಳ ಒಳಗೆ ಬೇಡಿಕೆ ಈಡೇರದೆ ಇದ್ದರೆ ಜಿಲ್ಲೆಯ ಎಲ್ಲ ತಾಲೂಕುಗಳ ಸಂಘಟನೆಗಳು, ವರ್ತಕರ ಬೆಂಬಲ ಪಡೆದು ಜಿಲ್ಲೆಯಲ್ಲಿ ಬಂದ್ ಮಾಡಲಾಗುವುದು ಎಂದರು.

ಆಕ್ಸಿಜನ್ ದುರಂತದ ಸಂತ್ರಸ್ತೆ ನಾಗರತ್ನ ಮಾತನಾಡಿ, ಆರ್‌ಸಿಬಿ ವಿಜಯೋತ್ಸವದಲ್ಲಿ ನಡೆದ ಕಾಲ್ತುಳಿತದಲ್ಲಿ ಸತ್ತರಿಗೆ 25 ಲಕ್ಷ ರೂ. ಪರಿಹಾರ ನೀಡಿದರು. ಚಾಮರಾಜನಗರದಲ್ಲಿ ನಡೆದ ಆಕ್ಸಿಜನ್ ದುರಂತದಲ್ಲಿ ಸತ್ತವರು ಜೀವಗಳಲ್ಲೇ?. ನಾಲ್ಕು ವರ್ಷಗಳು ಕಳೆಯುತ್ತಿದ್ದರೂ ಆಕ್ಸಿಜನ್ ದುರಂತದ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಲಾಗಿದೆ. ನಮಗೆ ಸರ್ಕಾರಿ ಉದ್ಯೋಗ ನೀಡಬೇಕು, ದುರಂತಕ್ಕೆ ಕಾರಣರಾದವರಿಗೆ ಶಿಕ್ಷೆಯಾಗಬೇಕು ಎಂದರು.

ನಮಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕಾಲಿಗೆ ಬಿದ್ದು ಮನವಿ ಮಾಡಿಕೊಂಡಿದ್ದೇವೆ. ಇನ್ನೆಷ್ಟು ಬಾರಿ ಸಿಎಂ ಕಾಲು ಹಿಡಿಯಬೇಕೋ ಗೊತ್ತಿಲ್ಲ ಎಂದು ಪ್ರಶ್ನಿಸಿದರು.

ಹೋರಾಟದ ಕುರಿತು ಚರ್ಚೆ: ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಮುಂದಿನ ಹಂತದ ಹೋರಾಟಗಳ ಕುರಿತು ಚರ್ಚೆ ಮಾಡಿದರು. ಆಕ್ಸಿಜನ್ ದುರಂತದ ಸಂತ್ರಸ್ತರ ಪರವಾಗಿ ಈವರೆಗೂ ಎಸ್‌ಡಿಪಿಐ ಪಕ್ಷದ ಹೋರಾಟ ಮಾಡುತ್ತಾ ಬಂದಿರುವುದಕ್ಕೆ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದರು. ರೈತ ಮುಖಂಡ ಗುರುಪ್ರಸಾದ್ ಮಾತನಾಡಿ, ನಾಲ್ಕು ಸಲ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಏನು ಮಾಡುತ್ತಿದ್ದಾರೆ. ನಮ್ಮ ಮುಂದಿನ ಹೋರಾಟಗಳು ಜನಪ್ರತಿನಿಧಿಗಳ ಮನೆಯ ಮುಂದೆಯೇ ನಡೆಯಲಿ ಎಂದರು. ಸಂತ್ರಸ್ತೆ ನಾಗರತ್ನ ಮಾತನಾಡಿ, ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಆಕ್ಸಿಜನ್ ದುರಂತದ ಸಂತ್ರಸ್ತರು ನನ್ನ ಬಳಿಗೆ ಬಂದೇ ಇಲ್ಲ ಎಂದರು. ಕಷ್ಟ ಇರುವವರ ಬಳಿಗೆ ಶಾಸಕರು ಬರಬೇಕು. ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ನಮ್ಮ ಪರವಾಗಿ ಅಧಿವೇಶನದಲ್ಲಿ ಧ್ವನಿ ಎತ್ತಿದರು. ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿ ಉಪವಾಸ ಸತ್ಯಾಗ್ರಹ ಮಾಡೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅಂತಿಮವಾಗಿ ಜೂ.13ರಂದು ಡಿಸಿ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ರಾಜ್ಯ ಸರ್ಕಾರಕ್ಕೆ ಒಂದು ತಿಂಗಳ ಕಾಲಾವಕಾಶ ನೀಡಿ ಬೇಡಿಕೆ ಈಡೇರಿಸದೆ ಇದ್ದರೆ ಜಿಲ್ಲಾದ್ಯಂತ ಬಂದ್‌ಗೆ ಕರೆ ನೀಡಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಹಿರಿಯ ಸಾಹಿತಿ ಕೆ.ವೆಂಕಟರಾಜು, ಕನ್ನಡ ಪರ ಸಂಘಟನೆಗಳ ಮುಖಂಡರಾದ ಚಾ.ರಂ.ಶ್ರೀನಿವಾಸಗೌಡ, ಸುರೇಶ್ ವಾಜಪೇಯಿ, ರಾಮಸಮುದ್ರ ಬಂಗಾರಸ್ವಾಮಿ, ನಿಜಧ್ವನಿ ಗೋವಿಂದರಾಜು, ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅಬ್ರಾಹರ್ ಅಹಮ್ಮದ್, ಜಿಲ್ಲಾಧ್ಯಕ್ಷ ಕಲೀಲ್‌ವುಲ್ಲ, ಉಪಾಧ್ಯಕ್ಷ ಸಿ.ಕೆ.ನಯಾಜುಲ್ಲಾ, ಪ್ರಧಾನ ಕಾರ್ಯದರ್ಶಿ ಮಹೇಶ್ ಮತ್ತು ಸಂತ್ರಸ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net