

ಕಲಬುರಗಿ: ಉತ್ತರ ಕರ್ನಾಟಕ ಜನರ ಜನರ ಬೇಡಿಕೆಯಂತೆ ಪಡಿತರ ವ್ಯವಸ್ಥೆಯಲ್ಲಿ 2 ಕೆಜಿ ಜೋಳ ಹಾಗೂ ಮೈಸೂರು ಭಾಗದಲ್ಲಿ 2 ಕೆಜಿ ರಾಗಿಯನ್ನು ಬರುವ ಜುಲೈ ತಿಂಗಳಿನಿಂದಲೇ ವಿತರಣೆ ಮಾಡಲು ಆರಂಭಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಕೆ. ಗೋಪಾಲಯ್ಯ ಪ್ರಕಟಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಇಲಾಖೆ ಅಧಿಕಾರಿಗಳ ಸಭೆ ನಡೆಸುವ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತೊಗರಿ ಬೇಳೆ ಜನರಿಗೆ ವಿತರಿಸಲು ಕೇಂದ್ರ ಸರ್ಕಾರ ಒಪ್ಪಿದ್ದರಿಂದ ಅದು ಶೀಘ್ರದಲ್ಲಿಯೇ ರೇಷನ್ಗೆ ಸೇರಲಿದೆ ಎಂದರು.
3 ಕೆಜಿ ಅಕ್ಕಿ ಜತೆಗೆ ರಾಗಿ ಇಲ್ಲವೇ ಜೋಳ ನೀಡಲಾಗುವುದು. ಈಗಾಗಲೇ ನಫೆಡ್ ಮೂಲಕ ಖರೀದಿಸಲಾಗಿದ್ದು, ಅದನ್ನು ಪಡಿತರ ಚೀಟಿದಾರರಿಗೆ ಹಂಚಿಕೆ ಮಾಡಲಾಗುವುದು. ರಾಜ್ಯದಲ್ಲಿ 1.27 ಕೋಟಿ ಪಡಿತರ ಚೀಟಿಗಳಿದ್ದು, 4.31 ಕೋಟಿ ಜನರಿಗೆ ಇದರ ಲಾಭವಾಗಲಿದೆ ಎಂದು ಹೇಳಿದರು.
ಏಪ್ರಿಲ್ನಿಂದ ಸರಿಯಾಗಿ ಪಡಿತರ ವಿತರಣೆ ಮಾಡದ ದೂರುಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 185 ಪಡಿತರ ಅಂಗಡಿ ಲೈಸನ್ಸ್ ಅಮಾನತು ಮಾಡಲಾಗಿದೆ. 50 ಪಡಿತರ ಅಂಗಡಿ ವಿರುದ್ದ ಕೇಸ್ ದಾಖಲಿಸಲಾಗಿದೆ. 500 ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.
ನಂತರ ಸಚಿವರು ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ, ಜಿಲ್ಲೆಯ ಬಗ್ಗೆ ಮಾಹಿತಿ ಪಡೆದುಕೊಂಡು ಸಮಸ್ಯೆಗಳನ್ನು ಪರಿಹರಿಸಲು ಸೂಚನೆ ನೀಡಿದರು.
ಸಚಿವರೊಂದಿಗೆ ಶಾಸಕರಾದ ಬಿ.ಜಿ.ಪಾಟೀಲ್, ಬಸವರಾಜ ಮತ್ತಿಮೂಡ, ಸುಭಾಷ ಗುತ್ತೇದಾರ, ರಾಜಕುಮಾರ ಪಾಟೀಲ ತೇಲ್ಕೂರ, ಜಿಪಂ ಅಧ್ಯಕ್ಷೆ ಸುವರ್ಣ ಮಾಲಾಜಿ, ಉಪಾಧ್ಯಕ್ಷೆ ಶೋಭಾ ಸಿರಸಗಿ, ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ, ಜಿಲ್ಲಾಧಿಕಾರಿ ಶರತ್ ಬಿ., ಜಿಪಂ ಸಿಇಒ ಡಾ.ಪಿ.ರಾಜಾ, ಹೆಚ್ಚುವರಿ ಡಿಸಿ ಡಾ.ಶಂಕರ ವಣಿಕ್ಯಾಳ, ಆಹಾರ ಇಲಾಖೆ ಜಂಟಿ ನಿರ್ದೇಶಕ ಡಿ.ಎಂ.ಪಾಣಿ, ಮಾಪನ ಇಲಾಖೆ ಉಪ ನಿರ್ದೇಶಕ ರಫೀಕ್ ಲಾಡಜಿ ಇತರರಿದ್ದರು.
ಅಕ್ರಮ ಅಕ್ಕಿ ಮಾರಾಟ ತನಿಖೆಗೆ ಸೂಚನೆ: ಬಡವರ ಹೊಟ್ಟೆಗೆ ಸೇರಬೇಕಾದ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗದಂತೆ ನಿಗಾ ವಹಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸಚಿವ ಗೋಪಾಲಯ್ಯ, ಕಲಬುರಗಿ-ಯಾದಗಿರಿ ಇನ್ನಿತರ ಜಿಲ್ಲೆಗಳಲ್ಲಿ ಪಡಿತರ ಅಕ್ಕಿಯನ್ನು ಕಾಳ ಸಂತೆಗೆ ಸಾಗಿಸುತ್ತಿರುವ ಆರೋಪ ಎದುರಿಸುತ್ತಿರುವ ಮಣಿಕಂಠ ಮತ್ತು ನರೇಂದ್ರ ಸಂಸ್ಥೆಗಳ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿ ತನಿಖೆ ನಡೆಸಲು ಆರ್ಸಿ ಮತ್ತು ಡಿಸಿಯವರಿಗೆ ಸೂಚನೆ ನೀಡಿದರು. ಅಲ್ಲದೆ ಈಚೆಗೆ ನೆಹರು ಗಂಜ್ ಇನ್ನಿತರ ಕಡೆ ದಾಳಿ ನಡೆಸಿದಾಗ 2 ಸಾವಿರ ಚೀಲದಷ್ಟು ಅಕ್ಕಿ ಪತ್ತೆಯಾಗಿರುವುದು ಮಾಹಿತಿ ನೀಡಿದ್ದಾರೆ. ಈ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದ್ದೇನೆ ಎಂದರು. ಕಲಬುರಗಿ ನಗರದ ಗೋದಾಮವೊಂದಕ್ಕೆ ಗುರುವಾರ ಭೇಟಿ ನೀಡಿದಾಗ ನಫೆಡ್ ನಿಯಮಗಳನ್ನು ಪೂರೈಸದವರ ವಿರುದ್ದ ಕ್ರಮ ಕೈಗೊಳ್ಳಲು ತಿಳಿಸಿದ್ದೇನೆ. ಪಡಿತರದಲ್ಲಿ ಅಕ್ರಮ ಮತ್ತು ಸೋರಿಕೆ ತಡೆಗಟ್ಟಲು ಪ್ರತಿ ತಿಂಗಳು ಐದು ಜಿಲ್ಲೆಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಲು ನಿರ್ಧರಿಸಿದ್ದೇನೆ ಎಂದರು. ಉಳ್ಳವರು ಬಿಪಿಎಲ್ ಕಾಡರ್್ ವಾಪಸ್ಸು ಕೊಡಿಆಥರ್ಿಕವಾಗಿ ಸಬಲರಾದರು, ಉಳ್ಳವರು ಹೊಂದಿರುವ ಬಿಪಿಎಲ್ ಪಡಿತರ ಚೀಟಿ ಹಿಂದಿರುಗಿಸಬೇಕು ಎಂದು ಸಚಿವ ಗೋಪಾಲಯ್ಯ ಕೋರಿದರು. ಕರೊನಾ ಹಾವಳಿಗೂ ಮುನ್ನ 63 ಸಾವಿರ ಅಕ್ರಮ ಪಡಿತರ ಚೀಟಿ ರದ್ದುಗೊಳಿಸಲಾಗಿದೆ. 93 ಲಕ್ಷ ರೂ. ದಂಡ ವಿಧಿಸಲಾಗಿದೆ. ಶ್ರೀಮಂತರು ಪಡಿತರ ಚೀಟಿ ಹೊಂದಿದಲ್ಲಿ ಸ್ವಯಂಪ್ರೇರಿತರಾಗಿ ಮುಂದೆ ಬಂದು ಮರಳಿಸಬೇಕು ಎಂದು ತಿಳಿಸಿದರು. ಯಾದಗಿರಿಯಲ್ಲಿ 700 ಜನರು ಚೀಟಿ ವಾಪಸ್ ಕೊಟ್ಟಿದ್ದಾರೆ ಎಂದರು.
ಕಾರ್ಡ್ ಇಲ್ಲದೆ ರೇಷನ್ ಪಡೆಯಿರಿ
ಕರೊನಾ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಘೋಷಿಸಿದಂತೆ ಪಡಿತರ ಚೀಟಿಗಳನ್ನು ಹೊಂದಿಲ್ಲದವರು ಮತ್ತು ಹೊಸದಾಗಿ ಅರ್ಜಿಗಳನ್ನು ಸಲ್ಲಿಸಿದ್ದವರ ಪೈಕಿ ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ಪಡಿತರವನ್ನು ಇನ್ನೂ ಪಡೆಯದವರು ಜೂನ್ 30 ರೊಳಗೆ ಪಡೆಯಬಹುದು ಎಂದು ಆಹಾರ ಸಚಿವ ಗೋಪಾಲಯ್ಯ ತಿಳಿಸಿದರು.