ಜುಲೈನಲ್ಲೇ 50 ಕೋಟಿ ರೂ. ಠೇವಣಿ ಸಂಗ್ರಹ

1-klr-5
Published on

ಕೋಲಾರ: ಡಿಸಿಸಿ ಬ್ಯಾಂಕ್ ಮೇಲೆ ಜನರು ನಂಬಿಕೆ ಇಟ್ಟಿರುವುದರಿಂದ ಜುಲೈ ತಿಂಗಳಲ್ಲೇ 50 ಕೋಟಿ ರೂ. ಠೇವಣಿ ಸಂಗ್ರಹವಾಗಿದ್ದು, ಟೀಕೆಗಳಿಗೆ ಹೆದರದೆ ಇಚ್ಛಾಶಕ್ತಿಯಿಂದ ಕೆಲಸ ಮಾಡುವ ಸಂಕಲ್ಪ ತೊಡಬೇಕು ಎಂದು ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸಿಬ್ಬಂದಿಗೆ ಹೇಳಿದರು.

ಬ್ಯಾಂಕ್ ಸಭಾಂಗಣದಲ್ಲಿ ಅಧಿಕಾರಿಗಳು, ಸಿಬ್ಬಂದಿ ಜತೆ ಭಾನುವಾರ ನಡೆದ ಠೇವಣಿ ಸಂಗ್ರಹದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಬ್ಯಾಂಕ್ ಮೇಲೆ ಜನರಿಗೆ ವಿಶ್ವಾಸ ಬಂದಿದೆ. ಆದರೆ ಜನರ ಬಳಿ ಹೋಗಲು ಬ್ಯಾಂಕ್ ಸಿಬ್ಬಂದಿಗೆ ಇಚ್ಛಾಶಕ್ತಿ ಕಾಣುತ್ತಿಲ್ಲ. ಒಳ್ಳೆಯ ಕೆಲಸ ಮಾಡಲು ಹೊರಟಾಗ ಟೀಕೆ ಸಹಜ, ಇದಕ್ಕೆ ಹೆದರುವ ಅಗತ್ಯವಿಲ್ಲ, ಬ್ಯಾಂಕ್ ಅಭಿವೃದ್ಧಿ ಏಕೈಕ ಗುರಿ. ಟೀಕೆಗಳನ್ನು ಮೆಟ್ಟಿನಿಂತು ಕೆಲಸ ಮಾಡಬೇಕು ಎಂದರು.

ಪ್ರಮುಖ ತರಕಾರಿ ಬೆಳೆಗಳಾದ ಟೊಮ್ಯಾಟೊ, ಆಲೂಗಡ್ಡೆ, ಮಾವು ಉತ್ತಮ ಫಸಲು ನೀಡಿದರೂ ಕರೊನಾ ಸಂಕಷ್ಟದಿಂದ ಬೆಲೆಯಿಲ್ಲದೆ ರೈತರು ನಷ್ಟ ಅನುಭವಿಸಿದ್ದಾರೆ. ಸಂಕಷ್ಟದಲ್ಲಿರುವ ರೈತರಿಗೆ ಸಾಲ ವಿತರಿಸೋಣ, ರೈತರ ಮನೆಬಾಗಿಲಿಗೆ ಹೋಗಿ ಧೈರ್ಯ ತುಂಬುವ ಮೂಲಕ ಡಿಸಿಸಿ ಬ್ಯಾಂಕ್ ಬಾಯಿಮಾತಿನ ಪ್ರಚಾರಕ್ಕೆ ಸೀಮಿತವಲ್ಲ ಎಂಬುದನ್ನು ಸಾಬೀತು ಮಾಡೋಣ ಎಂದರು.

ಬ್ಯಾಂಕ್ ದಿವಾಳಿಯಾಗಿ ರೈತರು, ಮಹಿಳೆಯರಿಗೆ ಸಾಲ-ಸೌಲಭ್ಯ, ಬಡ್ಡಿ, ಸಾಲಮನ್ನಾ ಸೌಲಭ್ಯದಿಂದ ವಂಚಿತರಾಗಿದ್ದಾಗ ತುಟಿ ಬಿಚ್ಚಲಿಲ್ಲ. ನಮ್ಮ ಆಡಳಿತ ಮಂಡಳಿ ಅವಧಿಯಲ್ಲಿ ಬ್ಯಾಂಕ್ ಸಾವಿರಾರು ಕೋಟಿ ರೂ. ಸಾಲ ನೀಡಿದೆ. ಈಗ ಸಹಿಸದೆ ಟೀಕಿಸುತ್ತಿದ್ದಾರೆ. ದೇಶದಲ್ಲೇ ಅತಿ ಹೆಚ್ಚು ಮಹಿಳೆಯರಿಗೆ ಸಾಲ ಸೌಲಭ್ಯ ನೀಡಿದೆ. ಸೊಸೈಟಿ, ಬ್ಯಾಂಕ್ ಗಣಕೀಕರಣ, ಮಹಿಳಾ ಸಂಘಗಳ ವಹಿವಾಟು ಇ-ಶಕ್ತಿ ಮೂಲಕ ಗಣಕೀಕೃತಗೊಂಡಿದ್ದು, ಬೆರಳ ತುದಿಯಲ್ಲಿ ಉಳಿತಾಯ, ಸಾಲ ಮರುಪಾವತಿ ಮಾಹಿತಿ ಲಭ್ಯವಾಗುತ್ತಿದೆ ಎಂದರು.

ಇ-ಶಕ್ತಿ ಸಂಪೂರ್ಣವಾಗಿ ಅನುಷ್ಠಾನಗೊಳಿಸುವಲ್ಲಿಯೂ ಶಕ್ತಿಮೀರಿ ಶ್ರಮಿಸಲಾಗಿದೆ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಎಲ್ಲ ಸೊಸೈಟಿಗಳು ಗಣಕೀಕರಣವಾಗುತ್ತಿರುವುದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ ಎಂದರು. ಬ್ಯಾಂಕ್ ಎಜಿಎಂ ಬೈರೇಗೌಡ, ಅಧಿಕಾರಿಗಳಾದ ದೊಡ್ಡಮನಿ ಹುಸೇನ್‌ಸಾಬ್, ಬಾಲಾಜಿ, ತಿಮ್ಮಯ್ಯ, ಪದ್ಮಮ್ಮ, ಶುಭಾ, ಮಹಮದ್ ಹ್ಯಾರೀಸ್, ಜಬ್ಬಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net