ಜು. ೪ರಂದು ಕ್ಯಾಪಿಟಲ್ ಸಿಟಿ ಚಿತ್ರ ಬಿಡುಗಡೆ

30 ckm 9
ಚಿಕ್ಕಮಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕ್ಯಾಪಿಟಲ್ ಸಿಟಿ ಚಲನಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
Published on

ಚಿಕ್ಕಮಗಳೂರು: ಕಲೆಯ ಬಗ್ಗೆ ಆಸಕ್ತಿ, ಕುತೂಹಲ ಇರುವ ಸಮಾನ ಮನಸ್ಕರು ಸೇರಿ ಕ್ಯಾಪಿಟಲ್ ಸಿಟಿ ಎಂಬ ಸದಭಿರುಚಿಯ ಕನ್ನಡ ಸಿನೆಮಾ ನಿರ್ಮಿಸಿದ್ದು, ಜು. ೪ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಅನಂತರಾಜು ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಯಾಪಿಟಲ್ ಸಿಟಿ ಸಿನೆಮಾ ರಾಜ್ಯಾದ್ಯಂತ ಸುಮಾರು ೧೫೦ ಚಿತ್ರಮಂದಿರಗಳಲ್ಲಿ ಜು.೪ ರಂದು ಬಿಡುಗಡೆಯಾಗಲಿದೆ ಎಂದು ಹೇಳಿದರು.

ಚಿತ್ರ ನಿರ್ಮಾಣಕ್ಕೆ ಇನ್‌ಫಿನಿಟಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ೨೫ ಮಂದಿ ನಿರ್ಮಾಪಕರು ಒಗ್ಗಟ್ಟಿನಿಂದ ಕೈಜೋಡಿಸಿ ಕೆಲಸ ಮಾಡಿದ್ದಾರೆ. ಕೆಲವರು ಸಿನೆಮಾದಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿದ್ದಾರೆ. ನಿರ್ಮಾಪಕ ಕೃಷ್ಣಮೂರ್ತಿ ರಾಜಕಾರಣಿ ಪಾತ್ರದಲ್ಲಿದ್ದಾರೆ ಎಂದು ಹೇಳಿದರು.

ಜಿಂದಗಿ ಸಿನೆಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶ ಪಡೆದು ಇದೀಗ ಕ್ಯಾಪಿಟಲ್ ಸಿಟಿ ಚಿತ್ರದಲ್ಲಿ ರಾಜೀವ್‌ರೆಡ್ಡಿ ಅವರು ನಾಯಕ ನಟನಾಗಿ ನಟಿಸುತ್ತಿದ್ದಾರೆ. ಪ್ರೇರಣಾ ನಾಯಕಿ ನಟಿಯಾಗಿದ್ದಾರೆ. ಖಳನಾಯಕನ ಪಾತ್ರದಲ್ಲಿ ಖ್ಯಾತ ಖಳನಟ ರವಿಶಂಕರ್ ಅವರ ಅಭಿನಯವಿದೆ ಎಂದು ವಿವರಿಸಿದರು.

ಅಕ್ಕ-ತಮ್ಮ, ತಂದೆ-ಮಗಳ ಭಾವನಾತ್ಮಕತೆಯೊಂದಿಗೆ ಬೆಂಗಳೂರಿನ ಭೂಗತ ಲೋಕದ ಕಥೆಯನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಚಿತ್ರದ ಮಧ್ಯೆ ಜಿ ಕನ್ನಡ ಖ್ಯಾತಿಯ ರಿತೇಶ್ ಮತ್ತು ಶರತ್‌ಲೋಹಿತಾಶ್ವ, ತೆಲುಗಿನ ಸುಮಂತ್ ಅವರು ಕಾಮಿಡಿ ಪಾತ್ರದಲ್ಲಿ ಪ್ರೇಕ್ಷಕರನ್ನು ನಕ್ಕು ನಗಿಸಲಿದ್ದಾರೆ ಎಂದು ಹೇಳಿದರು.

ತರೀಕೆರೆ ತಾಲೂಕಿನ ಶಿವಪ್ಪ ಕುಡ್ಲೂರು, ಬಾಬೂರೆಡ್ಡಿ, ಆನೇಕಲ್ ನಾಗರಾಜ್, ಕೆ.ಟಿ. ಮುನಿರಾಜು ಹಾಗೂ ಗುಣಶೇಖರನ್ ಕ್ಯಾಪಿಟಲ್ ಸಿನೆಮಾದಲ್ಲಿ ಅಭಿನಯಿಸಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಾಯಕನಟ ರಾಜೀವ್ ರೆಡ್ಡಿ, ನಿರ್ಮಾಪಕರಾದ ಕೃಷ್ಣಮೂರ್ತಿ, ಮುನಿರಾಜು, ನಾಗರಾಜ್, ಗುಣಶೇಖರನ್ ಮತ್ತಿತರ ಕಲಾವಿದರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net