ಜು.27ರಿಂದ 29ರವರೆಗೆ ಕೃಷಿ ಜಾತ್ರೆ

Shashikant patil
Published on

ಕಲಬುರಗಿ: ಸಾವಯವ, ಸುಸ್ಥಿರ ಕೃಷಿ ಬಗ್ಗೆ ಅರಿವು ಮೂಡಿಸಲು ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿAದ ಜು.27 ರಿಂದ 29ರವರೆಗೆ ರೈತರ ನಡೆ ಸಾವಯುವ ಕೃಷಿ ಕಡೆ ಘೋಷವಾಕ್ಯದಡಿ ಕೃಷಿ ಜಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕೆಕೆಸಿಸಿಐ ಅಧ್ಯಕ್ಷ ಶಶಿಕಾಂತ ಬಿ.ಪಾಟೀಲ್ ತಿಳಿಸಿದರು.

ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿವೆ. ಜು.೨೭ರಂದು ಬೆಳಗ್ಗೆ ೧೦ಕ್ಕೆ ಕನ್ಹೇರಿ ಮಠದ ಶ್ರೀ ಕಾಡಸಿದ್ಧೇಶ್ವರ ಸ್ವಾಮೀಜಿ ಸಾವಯುವ ಕೃಷಿ ಕಾರ್ಯಕ್ರಮ ಉದ್ಘಾಟಿಸಿ, ಉಪನ್ಯಾಸ ನೀಡಲಿದ್ದಾರೆ. ಬೆಳೆ ಮೌಲ್ಯವರ್ಧನೆ ಹಾಗೂ ಸಾವಯುವ ಕೃಷಿ ಕುರಿತ ವಿಚಾರಗೋಷ್ಠಿ ನಡೆಯಲಿವೆ. ಸಂಜೆ ೫ಕ್ಕೆ ಹಾಸ್ಯ ಕಲಾವಿದರಾದ ಬಸವರಾಜ ಮಹಾಮನಿ, ಗುಂಡಣ್ಣ ಡಿಗ್ಗಿ ಅವರಿಂದ ಹಾಸ್ಯ ಮಂಜರಿ, ಕೃಷಿ ವಿಜ್ಞಾನ ಕೇಂದ್ರದ ವಿದ್ಯಾರ್ಥಿಗಳಿಂದ ಸಾಲದ ಹೆಣ ನಾಟಕ ಪ್ರದರ್ಶನ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜು.೨೮ರಂದು ಸಂಜೆ ೫ಕ್ಕೆ ಕೃಷಿಯಲ್ಲಿ ವಿನೂತನ ಆವಿಷ್ಕಾರ ಸಾಧನೆಗೈದರ ೧೪ ರೈತರಿಗೆ ರೈತ ಸಾಧಕ ರತ್ನ ಪ್ರಶಸ್ತಿ ನೀಡಲಾಗುವುದು. ಮೂರು ದಿನ ವಿಚಾರಗೋಷ್ಠಿಗಳನ್ನು ಆಯೋಜಿಸಿದ್ದು, ಜೇನು ಸಾಕಣೆ, ಬಾಳೆ ಕಾಂಡದಿAದ ಬಟ್ಟೆ, ಸಮಗ್ರ ಕೃಷಿ, ಕೋಳಿ ಸಾಕಣೆ, ಸಾವಯವ ಕೃಷಿಯಲ್ಲಿ ಯಂತ್ರ, ಸಾವಯವ ಗೊಬ್ಬರ ತಯಾರಿಕೆ, ತ್ಯಾಜ್ಯ ನಿರ್ವಹಣೆ ಸೇರಿ ವಿವಿಧ ವಿಷಯಗಳ ಕುರಿತು ರೈತರಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಕೆಕೆಸಿಸಿಐ ಗೌರವ ಕಾರ್ಯದರ್ಶಿ ಮಂಜುನಾಥ ಜೇವರ್ಗಿ, ಕೃಷಿ ಉಪಸಮಿತಿ ಅಧ್ಯಕ್ಷ ಜಗದೀಶ ಗಾಜರೆ, ಗಂಜ್ ಅಸೊಸಿಯೇಷನ್ ಅಧ್ಯಕ್ಷ ಶ್ರೀಮಂತ ಉದನೂರ, ದಾಲ್ ಮಿಲ್ ಅಸೋಸಿಯೇಷನ್ ಅಧ್ಯಕ್ಷ ಚಂದ್ರಶೇಖರ ಕೋಬಾಳ, ಕೃಷಿ ಪರಿಕರಗಳ ಮಾರಾಟ ಸಂಘದ ಅಧ್ಯಕ್ಷ ಬಸವರಾಜ ಮಂಗಲಗಿ, ಪ್ರಮುಖರಾದ ಶರಣು ಪಪ್ಪಾ, ಸಂತೋಷ ಲಂಗರ, ಅಭೀಜಿತ ಪಟ್ಟಣಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net