

ಚಾಮರಾಜನಗರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಜು.12 ರಂದು ಲೋಕ್ ಅದಾಲತ್ ಆಯೋಜಿಸಲಾಗುವುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಪ್ರಭಾವತಿ ತಿಳಿಸಿದರು.
ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು ಹಾಗೂ ಕೊಳ್ಳೇಗಾಲದ 13 ನ್ಯಾಯಾಲಯಗಳಲ್ಲಿ ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆಯವರೆಗೂ ಬೈಟಕ್‌ಗಳನ್ನು ಏರ್ಪಡಿಸಿ ಸಂಧಾನಕಾರರನ್ನು ನೇಮಿಸಿ ಲೋಕ್ ಅದಾಲತ್ ನಡೆಸಲಾಗುವುದು. ಈ ಬಾರಿಯ ಲೋಕ್ ಅದಾಲತ್‌ನಲ್ಲಿ ಕಳೆದ ಬಾರಿಗಿಂತಲೂ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥ ಗೊಳಿಸುವ ನಿರೀಕ್ಷೆ ಇದೆ. ಈಗಾಗಲೇ ವಿಮಾ ಕಂಪನಿ, ಭೂ ಸ್ವಾಧೀನಾಧಿಕಾರಿ, ಬ್ಯಾಂಕ್‌ಗಳು, ಪೊಲೀಸ್ ಇಲಾಖೆ ಹಾಗೂ ವಿವಿಧ ಇಲಾಖೆಗಳ ಜತೆ ಪೂರ್ವಭಾವಿ ಸಭೆಯನ್ನು ನಡೆಸಲಾಗಿದೆ ಎಂದು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಲೋಕ್ ಅದಾಲತ್‌ನಲ್ಲಿ ಸಾರ್ವಜನಿಕರ ಹಿತಾಸಕ್ತಿ ಪ್ರಕರಣಗಳನ್ನು ಹೊರತುಪಡಿಸಿ, ಇತರೆ ಯಾವುದೇ ರೀತಿಯ ಸಿವಿಲ್ ಪ್ರಕರಣಗಳು, ದಾಂಪತ್ಯ ಹಕ್ಕುಗಳ ಪುನರ್ ಸ್ಥಾಪನೆ, ಜೀವನಾಂಶ, ಮಕ್ಕಳ ಸಂರಕ್ಷಣೆ ಹೇಗೆ ಸಂಬಂಧಿಸಿದ ಪ್ರಕರಣಗಳು, ಮೋಟಾರ್ ವಾಹನ ಅಪಘಾತ ಪ್ರಕರಣಗಳು, ರಾಜೀ ಯೋಗ್ಯ ಕ್ರಿಮಿನಲ್ ಪ್ರಕರಣ, ಚೆಕ್ಕು ಅಮಾನ್ಯ ಪ್ರಕರಣ, ಕಾರ್ಮಿಕ ಕಾಯ್ದೆಯಲ್ಲಿ ಬರತಕ್ಕ ಪ್ರಕರಣ, ವಿದ್ಯುತ್ ಕಳವು ಸಂಬಂಧಿತ ಪ್ರಕರಣ, ಅಕ್ರಮವಾಗಿ ಕಲ್ಲು ಮತ್ತು ಮರಳು ಸಾಗಾಣಿಕೆ ಪ್ರಕರಣ ಹಾಗೂ ಇನ್ನಿತರೆ ರಾಜೀಯೋಗ್ಯ ಪ್ರಕರಣಗಳನ್ನು ರಾಜೀ ಮಾಡಿಕೊಳ್ಳಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ ಹಾಜರಿದ್ದರು.
ಕಳೆದ ಬಾರಿ 74 ಸಾವಿರ ಪ್ರಕರಣ ಇತ್ಯರ್ಥ:
ಜಿಲ್ಲೆಯ ನ್ಯಾಯಾಲಯಗಳಲ್ಲಿ ಮಾ.8 ರಂದು ನಡೆಸಲಾದ ಲೋಕ್ ಅದಾಲತ್ ನಲ್ಲಿ ಒಟ್ಟು 74,307 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿತ್ತು. ನ್ಯಾಯಾಲಯದ 2359 ಪ್ರಕರಣಗಳಲ್ಲಿ 1598 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿತ್ತು. ವ್ಯಾಜ್ಯ ಪೂರ್ವ 73,886 ಪ್ರಕರಣಗಳಲ್ಲಿ 72,709 ಪ್ರಕರಣಗಳನ್ನು ಇತ್ಯರ್ಥ ಗೊಳಿಸಲಾಗಿತ್ತು. ಒಟ್ಟಾರೆ ಎಲ್ಲಾ ಪ್ರಕರಣಗಳಿಂದ 13.07 ಕೋಟಿ ರೂ, ಹಣವನ್ನು ತೀರ್ಮಾನಗೊಳಿಸಲಾಗಿತ್ತು.
ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಇದ್ದರೇ ಯಾರಿಗೂ ಕೂಡ ಸಮಸ್ಯೆ ಎದುರಾಗುವುದಿಲ್ಲ. ಈ ನಿಟ್ಟಿನಲ್ಲಿ ಕಾನೂನು ಸೇವಾ ಪ್ರಾಧಿಕಾರದಿಂದ ಕಾನೂನಿನ ನೆರವು ನೀಡುವ ಪ್ರಯತ್ನವನ್ನು ನಿರಂತರವಾಗಿ ಮಾಡಲಾಗುತ್ತಿದೆ. ಸಾರ್ವಜನಿಕರು ಲೋಕ್ ಅದಾಲತ್ ಪ್ರಯೋಜನವನ್ನು ಪಡೆದುಕೊಳ್ಳಬೇಕು.
-ಜಿ.ಪ್ರಭಾವತಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ, ಜಿಲ್ಲಾ ನ್ಯಾಯಾಲಯ, ಚಾಮರಾಜನಗರ