ಜೀವಾತ್ಮರಿಗೆ ಲೇಸು ಬಯಸುವವನು ಶರಣ: ಪ್ರೊ.ಚಂದ್ರಶೇಖರಯ್ಯ

10
Published on

ಮೈಸೂರು: ಸುತ್ತೂರು ಮಠದ ಶಿವರಾತ್ರಿ ರಾಜೇಂದ್ರ ಶ್ರೀಗಳು ಇತರರ ಕಷ್ಟಕ್ಕಾಗಿ, ಸಂತೋಷಕ್ಕಾಗಿ ತಮ್ಮ ಬದುಕನ್ನು ಮುಡುಪಿಟ್ಟ ಹೃದಯವಂತರು. ಅವರ ಆದರ್ಶಪಥವೇ ನಮ್ಮ ಜ್ಯೋತಿರ್ಪಥವಾಗಬೇಕು ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಚಂದ್ರಶೇಖರಯ್ಯ ಹೇಳಿದರು.

ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ 107ನೇ ಜಯಂತಿ ಮಹೋತ್ಸವ ಮತ್ತು ಸ್ನಾತಕ ವಿಭಾಗದ ಸಾಂಸ್ಕೃತಿಕ, ಕ್ರೀಡಾ ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರೀಗಳು ದೈಹಿಕವಾಗಿ ಅಷ್ಟೇ ನಮ್ಮನ್ನು ಅಗಲಿದ್ದಾರೆ. ವಾಸ್ತವವಾಗಿ ನಮ್ಮ ಹೃನ್ಮನಗಳಲ್ಲಿ ಬದುಕಿದ್ದಾರೆ. ಅವರು ಚಿರಂತನರು. ಬದುಕಿದ್ದ ಕಾಲದಲ್ಲೇ ಅವರು ಲಕ್ಷಾಂತರ ಮನಸ್ಸು ಗೆದ್ದವರು. ಇಂದಿನ ಜೆಎಸ್‌ಎಸ್ ಸಂಸ್ಥೆ ಮತ್ತು ಮಹಾವಿದ್ಯಾಪೀಠದ ಹುಟ್ಟಿಗೆ ಪ್ರಗತಿಗೆ ಭದ್ರ ಬುನಾದಿ ಹಾಕಿದವರು ಎಂದು ಸ್ಮರಿಸಿದರು.

ಶ್ರೀಗಳು ಜೀವನ ಕಟ್ಟಿಕೊಳ್ಳಲು ಕಾರಣರಾದ ತಂದೆ-ತಾಯಿಗಳಿಗಿಂತಲೂ ಹೆಚ್ಚಿನವರು. ಏಕೆಂದರೆ ತಂದೆ-ತಾಯಿಗಳು ಮಾಡಲಾಗದಂತಹ ಅನೇಕ ಸಹಾಯ ಮತ್ತು ಅನುಕೂಲ ಅನುಗ್ರಹಿಸಿದವರು. ಆದ್ದರಿಂದಲೇ ಅವರು ಶಾಶ್ವತರು, ಚಿರಂಜೀವಿಗಳು. ಅಲ್ಲದೆ, ಶ್ರೀಗಳು ಶ್ರೇಷ್ಠವಾದ ಭಾವನಾಜೀವಿಗಳು, ಆದರ್ಶವಾದಿಗಳು. ಆದರ್ಶವಾದಿಗಳಿಂದ ಸಮಾಜಕ್ಕೆ ಒಳ್ಳೆಯದೇ ಆಗುತ್ತದೆ. ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವವನು ನಿಜವಾದ ಶರಣ. ಶ್ರೀಗಳು ಎಲ್ಲರಿಗೂ ಲೇಸನ್ನೇ ಬಯಸಿದವರು ಎಂದರು.

ವಿದ್ಯಾಭ್ಯಾಸಕ್ಕೆಂದು ಮೈಸೂರಿಗೆ ಬಂದವರು ಇಲ್ಲಿ ವಿದ್ಯಾರ್ಥಿಗಳು ಪಡುತ್ತಿದ್ದ ಬವಣೆಯನ್ನು ನೋಡಿ, ನೊಂದು ತಮ್ಮ ವಿದ್ಯಾಭ್ಯಾಸ ಮೊಟಕಾದರೂ ಪರವಾಗಿಲ್ಲ. ಇಂತಹ ವಿದ್ಯಾರ್ಥಿಗಳಿಗೆ ತಮ್ಮ ಕಡೆಯಿಂದ, ಮಠದ ಕಡೆಯಿಂದ ಏನಾದರೂ ಅನುಕೂಲ ಮಾಡಬೇಕೆಂದು ಸ್ವಾರ್ಥವನ್ನು ಮರೆತು 12ರ ಹರೆಯದಲ್ಲಿ ತೆಗೆದುಕೊಂಡ ನಿರ್ಧಾರ ಒಂದು ಐತಿಹಾಸಿಕ ಘಟನೆ ಎನ್ನಬಹುದು. ಅಂದಿನ ಬ್ರಿಟಿಷರ ಆಡಳಿತ, ದಬ್ಬಾಳಿಕೆಯ ಸಂದರ್ಭದಲ್ಲಿ ಎಲ್ಲರೂ ವಿದ್ಯಾವಂತರಾಗಬೇಕು, ವಿದ್ಯೆಯೊಂದೇ ಎಲ್ಲ ಸಮಸ್ಯೆಗಳಿಗೆ ತಾರಕಮಂತ್ರವೆಂದು ಮನಗಂಡು ಕೇವಲ 12 ಮಕ್ಕಳಿಗೆ ಊಟದ ವ್ಯವಸ್ಥೆಯೊಂದಿಗೆ ಓದಲು ಅನುವು ಮಾಡಿಕೊಟ್ಟ ಶ್ರೀಗಳು. 1960ರ ಹೊತ್ತಿಗೆ ಸುತ್ತೂರು ಮಠದಲ್ಲಿ 4 ಸಾವಿರ ವಿದ್ಯಾರ್ಥಿಗಳಿಗೆ ಜ್ಞಾನಾನ್ನ ದಾಸೋಹಕ್ಕೆ ಕಾರಣರಾದರು ಎಂದರು.
ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಮಾತನಾಡಿ, ರಾಜೇಂದ್ರ ಶ್ರೀಗಳು ಈ ನಾಡು ಕಂಡ ಮಹಾಚೇತನ. ಇವರು ಹಬ್ಬಿಸಿದ ಜ್ಞಾನಜ್ಯೋತಿ ಇಂದು ವಿಶ್ವಾದ್ಯಂತ ಹರಡಿದೆ. ಉಚಿತ ಪ್ರಸಾದ ನಿಲಯದೊಂದಿಗೆ ಆರಂಭವಾದ ಸಂಸ್ಥೆ ಇಂದು 350ಕ್ಕೂ ಹೆಚ್ಚಿನ ಶಿಕ್ಷಣಸಂಸ್ಥೆಗಳಾಗಿ ಬೆಳೆದು ಜಾತ್ಯತೀತವಾಗಿ, ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ರೂಪುಗೊಂಡಿವೆ. ಇವುಗಳ ಸ್ಥಾಪನೆಯಲ್ಲಿ ಶ್ರೀಗಳ ದೂರದರ್ಶಿತ್ವ, ಅಂತಃಕರಣ ಮತ್ತು ಮಾತೃವಾತ್ಸಲ್ಯ ಇದೆ ಎಂದು ಹೇಳಿದರು.

ವಾಟಾಳು ಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯಸ್ವಾಮೀಜಿ ಆಶೀರ್ವಚನ ನೀಡಿದರು. ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪ್ರಾಂಶುಪಾಲ ಪ್ರೊ.ಎಂ.ಪಿ.ವಿಜಯೇಂದ್ರ ಕುಮಾರ್, ಬೋಧಕರಾದ ಎಸ್.ಸೋಮಶೇಖರ್, ಡಾ. ಎನ್.ಮಹೇಶ್ವರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net