ಜೀವವೈವಿಧ್ಯ ರಕ್ಷಣೆ ಪ್ರತಿಯೊಬ್ಬರ ಹೊಣೆ; ಮಲೆನಾಡಿನಷ್ಟು ವೈಶಿಷ್ಟೃ ಬೇರೆಲ್ಲೂ ಕಾಣಸಿಗದು: ಹರತಾಳು ಹಾಲಪ್ಪ

WEEE SGR
Published on

ಸಾಗರ: ಪಶ್ಚಿಮ ಘಟ್ಟದ ಶ್ರೇಣಿಯ ಮಲೆನಾಡು ತನ್ನ ಜೀವವೈವಿಧ್ಯತೆಯಿಂದಲೇ ಹೆಸರಾಗಿದೆ. ಅದನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.

ತಾಲೂಕಿನ ಇರುವಕ್ಕಿ ಕೃಷಿ ವಿವಿ ಆವರಣದಲ್ಲಿ ಶುಕ್ರವಾರ ಜೀವವೈವಿಧ್ಯ ನಿರ್ವಹಣಾ ಸಮಿತಿ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಹಾಗೂ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಏರ್ಪಡಿಸಿದ್ದ ಜೀವ ವೈವಿಧ್ಯ ನಿರ್ವಹಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜೀವಜಗತ್ತಿನಲ್ಲಿ ಬದುಕುವ ಹಕ್ಕು ಎಲ್ಲರಿಗೂ ಇದೆ. ಮನುಷ್ಯನಲ್ಲಿ ಅನೇಕ ವೈರುಧ್ಯಗಳಿವೆ. ಕೆಲವರ ಆಹಾರ ಪದ್ಧತಿಗಳ ವ್ಯತ್ಯಾಸದಿಂದ ಅಲ್ಪಾಯುಷ್ಯದಲ್ಲಿಯೇ ತಮ್ಮ ಜೀವನ ಅಂತ್ಯಗೊಳಿಸಿಕೊಳ್ಳುತ್ತಿರುವುದರ ಬಗ್ಗೆ ಚರ್ಚೆಯಾಗಬೇಕಿದೆ ಎಂದರು.

ಜೀವವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ವಿಶ್ವದಲ್ಲಿ ಮಲೆನಾಡಿನ ಪರಿಸರಕ್ಕೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ಇಲ್ಲಿರುವ ಜೀವವೈವಿಧ್ಯ ಜಗತ್ತಿನ ಬೇರಾವ ಭಾಗದಲ್ಲೂ ಕಾಣಸಿಗದು. ಜೀವವೈವಿಧ್ಯವನ್ನು ಉಳಿಸಿಕೊಳ್ಳುವಲ್ಲಿ ನಾವು ಮುಂದಾಗಬೇಕು. ಜನರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.

ಪ್ರಗತಿಪರ ಕೃಷಿಕರು, ಹೈನುಗಾರರು, ರೈತ ಕಾರ್ಮಿಕರು, ಅರಣ್ಯ ಮತ್ತು ಪಂಚಾಯತ್‌ರಾಜ್ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಪಿಡಿಒಗಳು ಮತ್ತು ವಿಜ್ಞಾನಿಗಳು ಸಂವಾದ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net