ಜೀವವೈವಿಧ್ಯ ಪಾರಂಪರಿಕ ತಾಣ ಗುರುತಿಸಿ

Meeting
Published on

ಬೀದರ್: ರಾಜ್ಯದಲ್ಲಿ ಹಲವೆಡೆ ಇರುವ ಅಪರೂಪದ ಬೆಟ್ಟಗಳನ್ನು ಈಗಾಗಲೇ ಜೀವವೈವಿಧ್ಯ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಗಿದೆ. ಅದೇ ರೀತಿ ಬೀದರ್ ಜಿಲ್ಲೆಯಲ್ಲೂ ಇಂಥ ತಾಣಗಳಿರುವುದನ್ನು ಗುರುತಿಸಬೇಕು ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅರಣ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಾಮಾಜಿಕ ಅರಣ್ಯ ಮತ್ತು ಎಸಿಎಫ್ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿದ ಅವರು, ಈಗಾಗಲೇ ಮಂಡಳಿ ಗುರುತಿಸಿರುವ ಜೀವವೈವಿಧ್ಯ ಪಾರಂಪರಿಕ ತಾಣಗಳ ಪರಿಣಾಮಕಾರಿ ಸಂರಕ್ಷಣೆಗೆ ಸೂಕ್ತ ಯೋಜನೆ ಹಮ್ಮಿಕೊಳ್ಳಲಾಗುತ್ತಿದೆ. ಜೀವವೈವಿಧ್ಯ ಕಾನೂನು-2002ರನ್ವಯ ರಾಜ್ಯದ ಬೇರೆ ಬೇರೆ ಕಡೆಯ ಪ್ರದೇಶಗಳನ್ನು ಜೀವವೈವಿಧ್ಯ ಪಾರಂಪರಿಕ ತಾಣ ಎಂದು ಘೋಷಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.

ಉತ್ತರ ಕರ್ನಾಟಕದಲ್ಲೇ ಬೀದರ್ ಜಿಲ್ಲೆ ಹಸಿರಿನ ಪ್ರದೇಶ ಹೊಂದಿದೆ. ಜಿಲ್ಲೆಯಲ್ಲಿ ಜೀವವೈವಿಧ್ಯ ಪಾರಂಪರಿಕ ತಾಣಗಳಿರುವುದನ್ನು ಜೀವವೈವಿಧ್ಯ ಸಮಿತಿಗಳು ಗುರುತಿಸಿ ವಿವರವಾದ ಪ್ರಸ್ತಾವನೆ ಕಳಿಸಿದಲ್ಲಿ ಪರಿಶೀಲಿಸಲಾಗುವುದು. ಇಂಥ ಕಾರ್ಯದಿಂದ ಜಿಲ್ಲೆಯಲ್ಲಿನ ಜೀವವೈವಿಧ್ಯತೆ ಉಳಿದು ಮುಂದಿನ ಪೀಳಿಗೆಗೆ ನೋಡಲು ಸಿಗಲಿದೆ ಎಂದರು.

30 ಎಕರೆ ವ್ಯಾಪ್ತಿಯಲ್ಲಿ ನಗರದ ಶ್ರೀ ಪಾಪನಾಶ ಲಿಂಗ ಕೆರೆ, ದೇವಾಲಯ ಇದೆ. ಇದನ್ನು ಜೀವವೈವಿಧ್ಯ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆ ಮಾಡಬಹುದಾಗಿದೆ ಎಂದು ಅರಣ್ಯ ಅಧಿಕಾರಿಗಳು ಅನಿಸಿಕೆ ವ್ಯಕ್ತಪಡಿಸಿದರು.

ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ ಎಸ್. ಮಾತನಾಡಿ, ಜಿಲ್ಲೆಯಲ್ಲಿ 40 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವಿದ್ದು, ಹುಮನಾಬಾದ್ ತಾಲೂಕಿನಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶವಿದೆ. ಬೀದರ್ ಸುತ್ತಲೂ ಅರಣ್ಯವಿದೆ ಎಂದು ಮಾಹಿತಿ ನೀಡಿದರು.

ಬಸವಕಲ್ಯಾಣ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಬಿ.ಪಾಟೀಲ್, ಬೀದರ್ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮನೊದ್ದೀನ್, ಸಾಮಾಜಿಕ ಉಪ ವಿಭಾಗದ ಪ್ರಭಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜೇಂದ್ರ ಇತರರಿದ್ದರು.

ಅರಣ್ಯ ಇಲಾಖೆ ಅಧಿಕಾರಿಗಳು ಮುಖ್ಯವಾಗಿ ಜೀವವೈವಿಧ್ಯ ಕಾಯ್ದೆ-2020 ಮತ್ತು ಅರಣ್ಯ ಕಾಯ್ದೆ ಉಲ್ಲಂಘನೆ ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು. ಕೆರೆಯಂಥ ಅರಣ್ಯೇತರ ಪ್ರದೇಶದ ಸುರಕ್ಷತೆಗೂ ಗಮನಹರಿಸಬೇಕು.| ಅನಂತ ಹೆಗಡೆ ಅಶೀಸರಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net