ಜೀವವಿಮೆ ಕಂತು ಪಾವತಿಗೆ ಮೀನಮೇಷ

17-2
Published on

ಬೆಳಗಾವಿ: ನಗರ ಸ್ವಚ್ಛಗೊಳಿಸುವ ಪೌರಕಾರ್ಮಿಕರಿಗೆ ಜೀವ ವಿಮೆ ಮಾಡಿಸಿ ಭದ್ರೆತೆ ಕಲ್ಪಿಸಿರುವ ಮಹಾನಗರ ಪಾಲಿಕೆಯು ಇದೀಗ ಅದೇ ವಿಮಾ ಕಂತು ಕಟ್ಟಲು ಮೀನಾಮೇಷ ಎಣಿಸುತ್ತಿದೆ. ವಿಮೆ ಅವಧಿ ಮಾರ್ಚ್‌ಕ್ಕೆ ಮುಗಿದು ಆರು ತಿಂಗಳು ಕಳೆದರೂ ಕಂತು ಕಟ್ಟಿಲ್ಲ.

ಮಹಾನಗರ ಪಾಲಿಕೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ 810 ಜನ ಪೌರ ಕಾರ್ಮಿಕರು ಸ್ವಚ್ಛತಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಪೌರಕಾರ್ಮಿಕರಿಗೆ ಜೀವ ಭದ್ರತೆ ಕಲ್ಪಿಸುವ ಉದ್ದೇಶದಿಂದ ಮಹಾನಗರ ಪಾಲಿಕೆಯು ಎಸ್ಸಿ, ಎಸ್ಟಿ ಯೋಜನೆಯ ಅನುದಾನದಡಿ ಜೀವ ವಿಮೆ ಮಾಡಿಸಿದೆ. ಅದಕ್ಕಾಗಿ ವಾರ್ಷಿಕ 25 ರಿಂದ 30 ಲಕ್ಷ ರೂ. ವರೆಗೆ ವೆಚ್ಚ ಮಾಡುತ್ತಿದೆ. ವಯಸ್ಸಿನ ಆಧಾರದ ಮೇಲೆ ಒಬ್ಬರಿಗೆ 3 ಸಾವಿರ ರೂ. ವರೆಗೆ ವಿಮೆ ಕಂತು ಪಾವತಿಸಲಾಗುತ್ತಿದೆ. ಆದರೆ, ಸರ್ಕಾರದಿಂದ ಅನುದಾನ ಬಾರದಿರುವುದು ಮತ್ತು ಆರ್ಥಿಕ ಸಮಸ್ಯೆ ಇತರ ಕಾರಣಗಳಿಂದಾಗಿ ವಿಮೆ ಕಂತು ಪಾವತಿಸಲು ಪಾಲಿಕೆ ಹಿಂದೇಟು ಹಾಕಿದೆ.

ಮಹಾನಗರ ಪಾಲಿಕೆಯ ವ್ಯಾಪ್ತಿಯ 58 ವಾರ್ಡ್‌ಗಳ ಪ್ರದೇಶ ಹೊರತುಪಡಿಸಿ ದಂಡುಮಂಡಳಿಯ ಪ್ರದೇಶಗಳಲ್ಲಿ ಕೂಡ ಗುತ್ತಿಗೆ ಮತ್ತು ಹೊರ ಗುತ್ತಿಗೆ ಆಧಾರದ ಮೇಲೆ ಪೌರಕಾರ್ಮಿಕರು ನಿತ್ಯವೂ ಕಸ ವಿಲೇವಾರಿ ಮಾಡುತ್ತಿದ್ದಾರೆ. ಕೆಲಸದ ಸಮಯದಲ್ಲಿ ಇವರ ಆರೋಗ್ಯದಲ್ಲಿ ಏರುಪೇರಾಗಿ ಜೀವಕ್ಕೆ ಕುತ್ತು ಬಂದರೆ ಅಥವಾ ಪೌರ ಕಾರ್ಮಿಕರು ಅಕಾಲಿನ ಮರಣ ಹೊಂದಿದ್ದರೆ ಅವರ ಕುಟುಂಬಕ್ಕೆ ಈ ಜೀವವಿಮೆ ಹಣ ದೊರೆಯಲಿದೆ. ಇದೀಗ ನಿಗದಿತ ಸಮಯದಲ್ಲಿ ವಿಮೆ ಕಂತು ಪಾವತಿಸದಿರುವ ಕಾರಣ ಜೀವವಿಮೆ ಅರ್ಧಕ್ಕೆ ಮೊಟಕುಗೊಳ್ಳುವ ಆತಂಕದಲ್ಲಿ ಪೌರಕಾರ್ಮಿಕರು ದಿನ ಕಳೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net