ಜೀವನೋತ್ಸವ ತುಂಬುವ ಜಾತ್ರೆಗಳು

kamthan
Published on

ಬೀದರ್: ದುಃಖದ ಸಮುದ್ರವಾಗಿರುವ ಸಂಸಾರಗಳಿಗೆ ಜಾತ್ರೆ, ಉತ್ಸವಗಳು ಜೀವನೋತ್ಸಾಹ ತುಂಬುವ ಪುಣ್ಯ ಕೇಂದ್ರಗಳಾಗಿವೆ ಎಂದು ಬೇಮಳಖೇಡ-ಗೋರ್ಟಾ ಹಿರೇಮಠ ಸಂಸ್ಥಾನದ ಶ್ರೀ ಡಾ.ರಾಜಶೇಖರ ಶಿವಾಚಾರ್ಯರು ಹೇಳಿದರು.

ತಾಲೂಕಿನ ಕಮಠಾಣ ಗ್ರಾಮದಲ್ಲಿ ಶರಭಾವತಾರ ಶ್ರೀ ವೀರಭದ್ರೇಶ್ವರ 12ನೇ ಜಾತ್ರಾ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿ, ಸಂಸಾರಿಕ ಜೀವನದಲ್ಲಿ ಸುಖವೆಂಬುದು ಗಗನ ಕುಸುಮವಾಗಿದ್ದು, ಕಷ್ಟಗಳಿಂದ ಮನುಷ್ಯ ಕುಸಿಯುತ್ತಿದ್ದಾನೆ. ಜೀವನದ ಆಸೆಗಳು ಕಮರಿಹೋಗುತ್ತಿದೆ. ಜಾತ್ರೆಗಳು ಇಂಥವರಲ್ಲಿ ಚೈತನ್ಯದ ಜತೆಗೆ ಜೀವನೋತ್ಸಾಹ ಹೆಚ್ಚಿಸುತ್ತವೆ ಎಂದರು.

ಗವಿಮಠದ ಶ್ರೀ ರಾಚೋಟಿ ಸ್ವಾಮಿ, ಗಚ್ಚಿನಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿ, ಶಿವರಾಜ ಪಾಟೀಲ್ ಐಸಪೂರ ಇತರರಿದ್ದರು. ದೇವಸ್ಥಾನದ ಕಮಿಟಿ ಅಧ್ಯಕ್ಷ ಕುಶಾಲರಾವ ಯಾಬಾ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಈ ವೇಳೆ ಲಕ್ಷ ದೀಪೋತ್ಸವ ನೆರವೇರಿತು. ಪ್ರಭುಶೆಟ್ಟಿ ಯಾಬಾ, ಕಲ್ಯಾಣರಾವ ಬಿರಾದಾರ, ಮಲ್ಲಿಕಾರ್ಜುನ ಔರಾದೆ, ಬಸವರಾಜ ಕ್ಯಾಸಾ, ಶಾಂತಯ್ಯಾ ಸ್ವಾಮಿ, ಸಿದ್ಧಯ್ಯಾ ಪೂಜಾರಿ, ರಾಜು ಯಾಬಾ, ಕಲ್ಯಾಣರಾವ ಯಾಬಾ ಇತರರಿದ್ದರು.

ಕರೊನಾ ಹಿನ್ನೆಲೆಯಲ್ಲಿ ರಥೋತ್ಸವ ರದ್ದುಪಡಿಸಲಾಗಿತ್ತು. ಶ್ರೀ ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವವನ್ನು ರಥದವರೆಗೂ ಕೊಂಡೊಯ್ದು ದೇವರನ್ನು ಥೇರಿನಲ್ಲಿಟ್ಟು ಪೂಜೆ ಮಾಡಿ ಕಳಸ ಏರಿಸಿ ಆರತಿ ಮಾಡಿ ಪುನಃ ಪಲ್ಲಕ್ಕಿ ಉತ್ಸವವನ್ನು ಮಂದಿರಕ್ಕೆ ತರಲಾಯಿತು. ಕರೊನಾ ಮಾರ್ಗಸೂಚಿಯಂತೆ ಜಾತ್ರೆಯನ್ನು ಸಾಂಕೇತಿಕವಾಗಿ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net