ಜೀವನಾನುಭವದ ಶಿಕ್ಷಣ ಬದುಕಿಗೆ ದಾರಿದೀಪ

4 ckm 6 web
Published on

ಚಿಕ್ಕಮಗಳೂರು: ಜೀವನಾನುಭವದ ಶಿಕ್ಷಣ ಬದುಕಿಗೆ ದಾರಿದೀಪ. ಅದಕ್ಕಾಗಿಯೇ ಓದು ಒಕ್ಕಾಲು ಬುದ್ಧಿ ಮುಕ್ಕಾಲು ಎಂಬ ಗಾದೆ ಮಾತು ಪ್ರಚಲಿತದಲ್ಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಹೇಳಿದರು. ಐಡಿಎಸ್​ಜಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಅಮೃತ ಸಿಂಚನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

84 ಲಕ್ಷ ಜೀವರಾಶಿ ದಾಟಿಬಂದ ಮಾನವ ಪರೋಪಕಾರ, ಸೇವೆಗಳಿಂದ ಉಪಕಾರಿಯಾಗಿ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು. ವಿದ್ಯಾರ್ಥಿಜೀವನ ಸುವರ್ಣಯುಗ ಎನ್ನುವುದು ವಿದ್ಯಾರ್ಥಿ ಜೀವನ ಮುಗಿದ ನಂತರ ಅರ್ಥವಾಗುತ್ತದೆ. ಈ ಹಂತದಲ್ಲಿ ಸಂತೋಷ ಅನುಭವಿಸುವುದರ ಜತೆಗೆ ವಿದ್ಯಾಭ್ಯಾಸದ ಕಡೆಗೂ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ದೈನಂದಿನ ಬದುಕಿನಲ್ಲಿ ಜನಪದ ಹಾಸುಹೊಕ್ಕಾಗಿದೆ. ಬದುಕಿನ ದಿಕ್ಕನ್ನು ಜನಪದ ಹಾಡುಗಳು ಬಿಂಬಿಸುತ್ತವೆ. ಶಾಲೆಯಲ್ಲಿ ಪುಣ್ಯಕೋಟಿ ಕಥೆಯ ಮೂಲಕ ಸತ್ಯ, ನ್ಯಾಯ, ಧರ್ಮ, ಪ್ರಾಮಾಣಿಕತೆ, ನಿಷ್ಠೆಯನ್ನು ಬೋಧಿಸಲಾಗುತ್ತಿತ್ತು. ಮುದ್ದಣ್ಣ ಮನೋರಮೆಯರ ಸರಸ ಸಲ್ಲಾಪದ ಮೂಲಕ ದಾಂಪತ್ಯದ ವೈಶಿಷ್ಟ್ಯ ಅರಿವಾಗುತ್ತಿತ್ತು ಎಂದರು.

ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿ, ಕಾಲೇಜಿನ ಜೀವನ ನೆನಪಿನ ಬುತ್ತಿ. ಇಲ್ಲಿ ಜವಾಬ್ದಾರಿ ಕಡಿಮೆ, ಅವಕಾಶಗಳ ಸುರಿಮಳೆ ಇರುತ್ತದೆ. ಬಂದ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವ ಚಾಕಚಕ್ಯತೆಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಆತ್ಮವಿಶ್ವಾಸ, ಆಶಾವಾದ, ನಿರಂತರ ಪ್ರಯತ್ನ, ಉತ್ಸಾಹದ ಜತೆಗೆ ಕಠಿಣ ಪರಿಶ್ರಮವಿದ್ದರೆ ಯಶಸ್ವಿ ವ್ಯಕ್ತಿಗಳಾಗಿ ಹೊರಹೊಮ್ಮಲು ಸಾಧ್ಯ ಎಂದು ಹೇಳಿದರು.

ಪ್ರಾಚಾರ್ಯ ಡಾ. ಕೆ.ಎ.ರಾಜಣ್ಣ ಮಾತನಾಡಿ, 3600ಕ್ಕೂ ಹೆಚ್ಚು ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಕಲಿಯುತ್ತಿದ್ದು 200 ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಇದ್ದಾರೆ. ರಾಜ್ಯದಲ್ಲೇ ಅತಿಹೆಚ್ಚು ವಿದ್ಯಾರ್ಥಿಗಳಿರುವ 3ನೇ ಕಾಲೇಜು ಎಂಬ ಹೆಗ್ಗಳಿಕೆ ಇದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net