

ಚಾಮರಾಜನಗರ: ಕರ್ನಾಟಕ-ತಮಿಳುನಾಡಿನ ಗಡಿಯಲ್ಲಿರುವ ಗುಡ್ಡಗಾಡಿನಲ್ಲಿ ಭಾರತದ ದೇಸಿ ತಳಿಗಳಲ್ಲಿ ಒಂದಾಗಿರುವ ಶ್ರಮಜೀವಿ ಪಶುಗಳು ರೈತರ ಜೀವನೋಪಾಯದ ಸಾರಥಿಗಳಾಗಿವೆ.
ದೇಶದಲ್ಲಿ ಸುಮಾರು 30 ಬಗೆಯ ದನದ ತಳಿಗಳಿವೆ. ಇವುಗಳನ್ನು ಹಾಲಿನ ತಳಿಗಳು, ಉಭಯ ಉದ್ದೇಶದ ತಳಿಗಳು, ಶ್ರಮಜೀವಿ ತಳಿಗಳು ಎಂದು ಭಾಗ ಮಾಡಲಾಗುತ್ತದೆ. ಇದರಲ್ಲಿ ಶ್ರಮಜೀವಿ ತಳಿಗಳ ಗುಂಪಿಗೆ ಸೇರಿರುವುದೇ ಬರಗೂರು ದನಗಳು. ತಮಿಳುನಾಡಿನ ಬರಗೂರು ಗುಡ್ಡಗಾಡು ಪ್ರದೇಶದ ಈ ತಳಿಯು ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳ ಜೀವನಕ್ಕೆ ಪ್ರಧಾನ ಆಧಾರವಾಗಿವೆ. ನಲ್ಲೂರು, ಕೂಡ್ಲೂರು, ಹೂಗ್ಯಂ, ಜಲ್ಲಿಪಾಳ್ಯ, ಯರಂಬಾಡಿ, ಸೂಳೆಕೋಬೆ, ನಕ್ಕುಂದಿ, ಮೀಣ್ಯಂ, ಗಾಜನೂರು, ಕೊಪ್ಪ, ಪೆದ್ದನಪಾಳ್ಯ, ಸತ್ಯಮಂಗಲ, ಅರ್ಜುನ ದೊಡ್ಡಿ, ದಿನ್ನಳ್ಳಿ, ಬೋರೆದೊಡ್ಡಿ, ದೊರೆದೊಡ್ಡಿ ಇನ್ನಿತರ ಗ್ರಾಮಗಳಲ್ಲಿ ಮಳೆ ಕೊರತೆ, ನೀರಾವರಿ ಸೌಲಭ್ಯ ಮರೀಚಿಕೆ, ಕಾಡುಪ್ರಾಣಿಗಳ ಕಾಟದಿಂದಾಗಿ ಈ ಪ್ರದೇಶದಲ್ಲಿ ಕೃಷಿಯಲ್ಲಿ ಖುಷಿ ಇಲ್ಲ. ಇಲ್ಲಿಗೆ ಹೊಂದಿಕೊಂಡಿರುವ ಬರಗೂರು ತಳಿಯ ದನಗಳ ಸಾಕಣೆಯೇ ಪ್ರಧಾನ ಉದ್ಯೋಗವಾಗಿದೆ. ಗ್ರಾಮದ ಒಬ್ಬೊಬ್ಬ ರೈತನ ಬಳಿಯೂ ಕನಿಷ್ಠ 10ರಿಂದ 20 ಬರಗೂರು ದನಗಳಿವೆ. ಪಶು ಪಾಲನೆಯನ್ನು ನಾಶಪಡಿಸುತ್ತಿರುವ ಆಧುನಿಕ ಕೃಷಿಗೆ ಸೆಡ್ಡು ಹೊಡೆಯುವಂತೆ ಇಲ್ಲಿ ಪಶು ಪಾಲನೆ ನಡೆಯುತ್ತಿದೆ. ಪ್ರತಿ ಮನೆಯ ಆವರಣದಲ್ಲೂ ಇರುವ ದನದ ಕೊಟ್ಟಿಗೆಗಳೇ ಇದಕ್ಕೆ ಸಂಕೇತ.
ಬರಗೂರು ತಳಿಯ ಹಸುಗಳು ಹಾಲು ಕೊಡುವುದು ಕಡಿಮೆ. ದಿನಕ್ಕೆ 1ರಿಂದ 2 ಲೀಟರ್ ಹಾಲು ಸಿಕ್ಕರೆ ಅದೇ ಹೆಚ್ಚು. ಆದರೆ ಹಸು, ದನಗಳ ಮಾರಾಟ, ಗೊಬ್ಬರ ಮಾರಾಟದಲ್ಲಿ ರೈತರಿಗೆ ಆದಾಯವಿದೆ. ತಮಿಳುನಾಡಿನಲ್ಲಿ ನಡೆಯುವ ದನಗಳ ಜಾತ್ರೆಯಲ್ಲಿ ಖರೀದಿ ಜೋರಾಗಿದೆ. ಇವುಗಳ ಗೊಬ್ಬರವನ್ನು ವರ್ಷಕ್ಕೆ ಒಮ್ಮೆ ಮಾರಾಟ ಮಾಡುವುದರಿಂದಲೂ ವರಮಾನ ದೊರೆಯುತ್ತಿದೆ. ದಲ್ಲಾಳಿಗಳ ಹಾವಳಿಯಿಂದಾಗಿ ರೈತರಿಗೆ ಗೊಬ್ಬರದಲ್ಲೂ ಪೂರ್ತಿ ಹಣ ಸಿಗುತ್ತಿಲ್ಲ. ಆದಾಯದ ಮೂಲಗಳಿಲ್ಲದ ಗುಡ್ಡಗಾಡು ಪ್ರದೇಶದಲ್ಲಿ ಬರಗೂರು ದನಗಳ ಸಾಕಣೆ ರೈತರನ್ನು ಮಾಲೀಕರನ್ನಾಗಿ ಮಾಡಿದೆ. ಕೂಲಿಕಾರರಿಗೆ ಉದ್ಯೋಗ ದೊರಕಿಸಿಕೊಟ್ಟಿದೆ. ದನ ಮೇಯಿಸುವವರು ತಿಂಗಳಿಗೆ ಇಂತಿಷ್ಟು ಸಂಬಳ ಪಡೆದುಕೊಳ್ಳುತ್ತಿದ್ದಾರೆ.
ಸವಾಲಿನ ದಾರಿಯಲ್ಲಿ...
ಗುಡ್ಡಗಾಡು ಪ್ರದೇಶದಲ್ಲಿ ಸವಾಲಿನ ದಾರಿಯಲ್ಲಿ ಸಾಗಿ ಹೈನುಗಾರಿಕೆ ಮಾಡಬೇಕಾಗಿದೆ. ಕೃಷಿಗೆ ಪೂರಕವಲ್ಲದ ಜಾಗದಲ್ಲಿ ಮೇವು ಬೆಳೆಯಲು ಸಾಧ್ಯವಾಗುತ್ತಿಲ್ಲ. ಬಡ ರೈತರ ಶ್ರಮವೆಲ್ಲ ಮನೆಗೆ ಬೇಕಾದ ಆಹಾರ ಪದಾರ್ಥಗಳನ್ನು ಮಾತ್ರ ಬೆಳೆದುಕೊಳ್ಳುವುದಕ್ಕಷ್ಟೇ ಸಾಕಾಗುತ್ತಿದೆ. ದನಗಳಿಗೆ ಮೇವು ಒದಗಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬೆಟ್ಟ, ಗುಡ್ಡ ಮತ್ತು ಬಯಲು, ಕಾಡು ಪ್ರದೇಶಗಳನ್ನು ಆಶ್ರಯಿಸಬೇಕಾಗಿದೆ. ಮಲೆ ಮಹದೇಶ್ವರ ಬೆಟ್ಟದ ಕಾಡಿನ ಹಸಿರೇ ದನಗಳಿಗೆ ಮೇವಾಗಿವೆ. ದನಗಳ ಹಿಂಡನ್ನು ಕಾಯುವ ದನಗಾಹಿಯು ಬೆಳಗ್ಗೆಯೇ ಅವುಗಳನ್ನು ಕಾಡಿನತ್ತ ಕರೆದುಕೊಂಡು ಹೋಗಿ ಮೇಯಿಸುತ್ತಾನೆ. ಸಂಜೆ ವೇಳೆಗೆ ಮನೆಯ ಹತ್ತಿರಕ್ಕೆ ಕರೆತಂದು ಕೊಟ್ಟಿಗೆಯೊಳಕ್ಕೆ ಕೂಡಿಹಾಕುತ್ತಾನೆ. ಕಾಡಿನೊಳಗೆ ಮೇಯುವಾಗ ವನ್ಯಪ್ರಾಣಿಗಳು ದಾಳಿ ಮಾಡಿದ ಉದಾಹರಣೆಗಳೂ ಇವೆ. ಗ್ರಾಮಗಳೆಲ್ಲವೂ ಕಾಡಂಚಿನಲ್ಲಿವೆ. ದೂರ ದೂರದಲ್ಲಿರುವ ಮನೆಗಳ ಬಳಿ ಹೊರಗೆ ಕೊಟ್ಟಿಗೆಗಳನ್ನು ಕಟ್ಟಲಾಗಿದೆ. ಇದರೊಳಗಿರುವ ದನಗಳ ಹಿಂಡಿನ ಮೇಲೆ ಕಾಡುಪ್ರಾಣಿಗಳು ದಾಳಿ ಮಾಡಿರುವುದೂ ಉಂಟು. ದನಗಳಿಗೆ ವಿಮೆ ಮಾಡಿಸುವುದು, ಕಿವಿಯೋಲೆ ಹಾಕಿಸದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಕಾಡಿನಲ್ಲಿ ಮೇವು ಮೇಯುವಾಗ ಪ್ರಾಣಿ ದಾಳಿ ಮಾಡಿದರೆ ಪರಿಹಾರ ಸಿಗುವುದಿಲ್ಲ. ಒಟ್ಟಾರೆ ಗುಡ್ಡಗಾಡಿನಲ್ಲಿ ಮೇವಿಗಾಗಿ ಕಾಡು ಪ್ರದೇಶವನ್ನು ಆಶ್ರಯಿಸಬೇಕಾದ ಸ್ಥಿತಿ, ಕಾಡು ಪ್ರಾಣಿಗಳ ಹಾವಳಿ, ರೋಗಬಾಧೆ ಹೊಡೆತದಂತಹ ಸವಾಲುಗಳನ್ನು ಹೈನುಗಾರಿಕೆ ಎದುರಿಸುತ್ತಿದೆ.
ದುಡಿಮೆಗೆ ಹೆಸರುವಾಸಿ
ಬರಗೂರು ತಳಿಯ ದನಗಳು ದುಡಿಮೆಯ ದನಗಳಾಗಿವೆ. ಇದಕ್ಕೆ ಪರ್ಯಾಯ ಹೆಸರು ಇಲ್ಲ. ಮೈಸೂರು ವಿಧದ ದನಗಳೆಂದು ಇವನ್ನು ಪರಿಗಣಿಸಲಾಗುತ್ತದೆ. ಮೈ ಬಣ್ಣ ಕಂದು, ಕೆಂಪು ಹಾಗೂ ಬಿಳಿ, ಕೊಂಬುಗಳೂ ಕೂಡ ಕಂದು ಬಣ್ಣ, ನೀಳವಾಗಿ ಉದ್ದ ಬೆಳೆಯುತ್ತವೆ. ಕಂದು ಮೈಬಣ್ಣದ ಮೇಲೆ ಬಿಳಿಯ ಮಚ್ಚೆಗಳಿರುತ್ತವೆ. ತೆಳುವಾದ ಕಾಲುಗಳು, ಸಾಮಾನ್ಯವಾಗಿ ಇವುಗಳ ದೇಹದ ತೂಕ ತುಸು ಕಡಿಮೆ. ಚಿಕ್ಕದಾದ ಬಾಲವನ್ನು ಹೊಂದಿವೆ. ಸಾಮಾನ್ಯವಾಗಿ ಕಾಡುವ ರೋಗಬಾಧೆಗಳೇ ಇವುಗಳಲ್ಲೂ ಕಾಣಿಸಿಕೊಳ್ಳುತ್ತವೆ. ಮೊದಲೆಲ್ಲ ರೈತರು ಔಷಧೀಯ ಸಸ್ಯಗಳನ್ನು ಬಳಕೆ ಮಾಡುತ್ತಿದ್ದರು. ಈಗ ಪಶು ಇಲಾಖೆ ವೈದ್ಯರ ಬಳಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಚಿರತೆಯೊಂದಿಗೆ ಹೋರಾಡಿ ಕರು ರಕ್ಷಣೆ: ಕರುವಿನ ಮೇಲೆ ದಾಳಿ ಮಾಡಿದ್ದ ಚಿರತೆಯೊಂದಿಗೆ ತಾಯಿ ಹಸು ಹೋರಾಟ ನಡೆಸಿ ತಮ್ಮ ಕಂದಮ್ಮನ ಪ್ರಾಣ ಉಳಿಸಿದೆ. ಹನೂರು ತಾಲೂಕಿನ ಹೂಗ್ಯಂ ಸಮೀಪದ ಯರಂಬಾಡಿ ಗ್ರಾಮದ ರೈತ ಕೊಡವೇರಿಗೌಡ ಸಾಕಿದ್ದ ಕರುವಿನ ಮೇಲೆ ಇತ್ತೀಚೆಗೆ ಚಿರತೆ ದಾಳಿ ಮಾಡಿತ್ತು. ಕರುವಿನ ಕತ್ತು ಕಚ್ಚಿದ್ದರಿಂದ ಆಕ್ರಂದನ ಜೋರಾಗಿತ್ತು. ಸಮೀಪದಲ್ಲೇ ಇದ್ದ ತಾಯಿ ಹಸು ಚಿರತೆಗೆ ಗುದ್ದಲು ಪ್ರಯತ್ನಿಸಿದೆ. ಆಗ ಕರು ಚಿರತೆಯಿಂದ ಪಾರಾಗಿ ಮನೆಯ ಕೊಟ್ಟಿಗೆ ಸಮೀಪಕ್ಕೆ ಓಡಿ ಹೋಗಿದೆ. ಸದ್ದು ಕೇಳಿ ರೈತನ ಕುಟುಂಬ ದೂರದಿಂದ ಕೂಗು ಹಾಕಲು ಆರಂಭಿಸಿದ ಕೂಡಲೇ ಚಿರತೆ ಓಡಿ ಹೋಗಿದೆ. ಈ ಕುರಿತು ರೈತ ಕೊಡವೇರಿಗೌಡ ವಿಜಯವಾಣಿಯೊಂದಿಗೆ ಮಾತನಾಡಿ, ನಮ್ಮ ಭಾಗದಲ್ಲಿ ಚಿರತೆ ಕಾಟ ಹೆಚ್ಚಾಗಿದೆ. ನಾನು ಒಂದು ಕಾಲದಲ್ಲಿ 200ಕ್ಕೂ ಹೆಚ್ಚು ಬರಗೂರು ದನಗಳನ್ನು ಸಾಕಿದ್ದೆ. ಚಿರತೆ ಹಾವಳಿ ತಡೆಯಲಾಗದೆ ಎಲ್ಲವನ್ನೂ ಮಾರಾಟ ಮಾಡಿಬಿಟ್ಟೆ. 20-30 ದನಗಳನ್ನು ಮಾತ್ರ ಉಳಿಸಿಕೊಂಡಿದ್ದೇನೆ ಎಂದಿದ್ದಾರೆ.
ಬರಗೂರು ದೇಸಿ ಹಸು, ದನಗಳ ಸಾಕಣೆಯಿಂದ ನಮ್ಮ ಜೀವನ ನಡೆಯುತ್ತಿದೆ. ಮನೆ ಬಳಕೆಗೆ ಹಾಲು, ಗೊಬ್ಬರ ಮತ್ತು ಕರುಗಳ ಮಾರಾಟ ಮಾಡುವುದರಿಂದ ಆದಾಯ ಸಿಗುತ್ತಿದೆ. ಬಸವರಾಜು, ಯರಂಬಾಡಿ ಗ್ರಾಮಸ್ಥ, ಹನೂರು ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ಬರಗೂರು ತಳಿಯ ದನಗಳ ಪಶುಪಾಲನೆ ನಡೆಯುತ್ತಿದೆ. ಜಿಲ್ಲಾದ್ಯಂತ ಜಾನುವಾರುಗಳ ಗಣತಿ ನಡೆಯುತ್ತಿದೆ. ಇದರಿಂದ ಗುಡ್ಡಗಾಡಿನಲ್ಲಿ ಸಾಕುತ್ತಿರುವ ದನಗಳ ನಿಖರ ಸಂಖ್ಯೆಯೂ ತಿಳಿಯುತ್ತದೆ. ಇವುಗಳ ರೋಗಬಾಧೆ ತಡೆಗೆ ಕಾಲಕಾಲಕ್ಕೆ ಲಸಿಕೆಗಳನ್ನು ನೀಡಲಾಗುತ್ತಿದೆ. ಡಾ.ಹನುಮೇಗೌಡ, ಉಪ ನಿರ್ದೇಶಕ, ಪಶು ಪಾಲನಾ ಇಲಾಖೆ, ಚಾಮರಾಜನಗರ