

ಚಿತ್ರದುರ್ಗ: ಪ್ರಸ್ತುತ ದಿನಗಳಲ್ಲಿ ಒತ್ತಡದ ನಡುವೆ ಜೀವನಶೈಲಿ ಬದಲಿಸಿಕೊಂಡರೆ, ಭವಿಷ್ಯಕ್ಕೂ ಬುನಾದಿಯಾಗಲಿದೆ. ಈ ಕುರಿತು ನಿರ್ಲಕ್ಷೆ ವಹಿಸಿದರೆ, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ದೇವರಾಜು ಅರಸ್ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಅಭಿಪ್ರಾಯಪಟ್ಟರು.
ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆ ಸಭಾಂಗಣದಲ್ಲಿ ಸಂಸ್ಥೆ, ಪ್ರಕೃತಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಿಂದ ಗುರುವಾರ ಹಮ್ಮಿಕೊಂಡಿದ್ದ 8ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯಲ್ಲಿ ಮಾತನಾಡಿದರು.
ಆರೋಗ್ಯ ಸಮಸ್ಯೆ ಅನೇಕರನ್ನು ಕಾಡುತ್ತಿದ್ದು, ಹೆಚ್ಚಿನ ಕಾಳಜಿ ವಹಿಸಬೇಕಿದೆ. ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡರೆ ಆರೋಗ್ಯ ವೃದ್ಧಿಯಾಗಲಿದೆ ಎಂದು ಸಲಹೆ ನೀಡಿದರು.
ಯುವಸಮೂಹ, ವಿದ್ಯಾರ್ಥಿಗಳು ಶಿಸ್ತಿನ ಜೀವನ ನಡೆಸಲು ಮುಂದಾದರೆ, ಗುರಿ ತಲುಪಲು ಸಹಕಾರಿಯಾಗಲಿದೆ. ಇಲ್ಲದಿದ್ದರೆ, ಬದುಕಿನಲ್ಲಿ ತುಂಬಾ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದರು.
ನಮ್ಮ ಆಹಾರ ಪದ್ಧತಿ ಬದಲಾಗಬೇಕು. ಅಂತರಂಗ ಶುದ್ಧಗೊಳಿಸಿಕೊಂಡು ಎಲ್ಲರಿಗೂ ಒಳಿತನ್ನು ಬಯಸಬೇಕು. ಪರೋಪಕಾರ ಗುಣಗಳು ಎತ್ತರಕ್ಕೆ ಕೊಂಡೊಯ್ಯಲಿದೆ. ದೇಶದ ಆಯುರ್ವೇದ ಪದ್ಧತಿ ಆರೋಗ್ಯ ರಕ್ಷಣೆಗೆ ಉಪಯುಕ್ತವಾಗಿದೆ ಎಂದು ಹೇಳಿದರು.
ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ.ನವಾಜ್ ಅಹಮದ್ ಮಾತನಾಡಿ, ಆರ್ಯುವೇದವನ್ನು ಇಡೀ ದೇಶದಲ್ಲಿ ಜನಪ್ರಿಯಗೊಳಿಸಲು ಕೇಂದ್ರ ಸರ್ಕಾರ ವಿಶೇಷ ಯೋಜನೆ ಜಾರಿಗೊಳಿಸಿದೆ. ಪ್ರತಿಯೊಬ್ಬರನ್ನೂ ತಲುಪಬೇಕು ಎನ್ನುವುದು ಮುಖ್ಯ ಉದ್ದೇಶವಾಗಿದೆ ಎಂದರು.
ಸಂಸ್ಥೆಯ ಆಡಳಿತಾಧಿಕಾರಿ ಎಚ್.ಚಂದ್ರಕಲಾ, ಉಪನ್ಯಾಸಕಿ ಡಾ.ಎಸ್.ಕೆ.ಪೃತ್ವಿ, ವಿವಿಧ ವಿಭಾಗಗಳ ಪ್ರಾಂಶುಪಾಲರಾದ ಕೋಟ್ರೇಶ್, ಜಿ.ಇ.ಬೈರಸಿದ್ದಪ್ಪ, ಡಾ.ಶಿವಕುಮಾರ್, ಮಹಂತೇಶ್, ಮುಖ್ಯಶಿಕ್ಷಕ ಪಾಪಣ್ಣ, ತಿಪ್ಪೇಸ್ವಾಮಿ ಇತರರಿದ್ದರು.