ಜೀವನಮಟ್ಟ ಸುಧಾರಿಸಿದ ಗ್ಯಾರಂಟಿ ಯೋಜನೆ

14RAM1
Published on

ರಾಮದುರ್ಗ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಜನರ ಜೀವನ ಮಟ್ಟವನ್ನು ಸುಧಾರಿಸುತ್ತಿವೆ. ಬಿಜೆಪಿಯವರು ವಿನಾಕಾರಣ ಟೀಕೆ ಮಾಡುತ್ತಿದ್ದಾರೆ. ಅಭಿವೃದ್ಧಿ ಕೆಲಸಗಳೂ ನಡೆಯುತ್ತಿವೆ ಎಂದು ವಿಧಾನಸಭೆ ಮುಖ್ಯ ಸಚೇತಕ, ಶಾಸಕ ಅಶೋಕ ಪಟ್ಟಣ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಏರ್ಪಡಿಸಿದ್ದ ಪುರಸಭೆ ವ್ಯಾಪ್ತಿಯ 27 ವಾರ್ಡುಗಳಲ್ಲಿ ವಿವಿಧ ಅಭಿವದ್ಧಿ ಕಾಮಗಾರಿಗಳಿಗೆ ಎಸ್‌ಎ್ಸಿ ವಿಶೇಷ ಅನುದಾನದಲ್ಲಿ ಮಂಜೂರಾದ 20 ಕೋಟಿ ರೂ. ಅಭಿವದ್ಧಿ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ಸ್ಥಳೀಯ ಪುರಸಭೆಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಅನುದಾನ ಬಂದಾಗ ತಾರತಮ್ಯ ಮಾಡದೆ ಎಲ್ಲ ವಾರ್ಡಗಳಿಗೆ ಅನುದಾನ ಹಂಚಿಕೆ ಮಾಡಿದ್ದೇನೆ. ಎಲ್ಲರೂ ಒಕ್ಕೊರಲಿನಿಂದ ಕೆಲಸ ಮಾಡಿದರೆ ಪಟ್ಟಣ ಅಭಿವೃದ್ಧಿಯಾಗುತ್ತದೆ ಎಂದರು.

ಪಟ್ಟಣದ ಅಭಿವೃದ್ಧಿಗೆ ಎಸ್‌ಎ್ಸಿ ಅನುದಾನದಲ್ಲಿ 50 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿತ್ತು. ಮೊದಲ ಹಂತದಲ್ಲಿ 20 ಕೋಟಿ ರೂ. ನೀಡಿದ್ದು, ಇನ್ನೂ 20-25 ಕೋಟಿ ರೂ. ಅನುದಾನ ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದರು.

ಮುಳ್ಳೂರು ಘಾಟ್ ರಸ್ತೆಯನ್ನು ಸರಳೀಕರಣಗೊಳಿಸಲಾಗಿದೆ. ಪಟ್ಟಣದ ಮಿನಿ ವಿಧಾನಸೌಧ ಎದುರಿನ ಕುದರೆ ಬಯಲಿನಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲಾಗುವುದು. ಕುದರೆ ಬಯಲು ಮೈದಾನ ಬಾಗಲಕೋಟೆಯ ಬಿವಿವಿ ಸಂಘದ ಆಸ್ತಿಯಾಗಿದ್ದು, ಈಗಿರುವ ಹೊಸ ಬಸ್ ನಿಲ್ದಾಣವನ್ನು ಬಿವಿವಿ ಸಂಘಕ್ಕೆ ಬಿಟ್ಟುಕೊಟ್ಟು ಕುದುರೆ ಮೈದಾನದ ಜಾಗದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು.

ಪುರಸಭೆ ಅಧ್ಯಕ್ಷೆ ಲಕ್ಷ್ಮೀ ಕಡಕೋಳ, ಉಪಾಧ್ಯಕ್ಷೆ ಸರಿತಾ ಧೂತ, ಸ್ಥಾಯಿ ಸಮಿತಿ ಚೇರ್ಮನ್ ರಾಜು ಬೆಂಬಳಗಿ, ಬೆಳಗಾವಿ ಜಿಲ್ಲಾ ನಗರಾಭಿವದ್ಧಿ ಕೋಶ ಕಾರ್ಯಪಾಲಕ ಅಭಿಯಂತ ವಿ.ಎಸ್. ತಡಸಲೂರ, ಸಹಾಯಕ ಕಾರ್ಯಪಾಲಕ ಅಭಿಯಂತ ಎ.ಬಿ. ರಜಪೂತ ಇತರರಿದ್ದರು. ಪುರಸಭೆ ಮುಖ್ಯಾಧಿಕಾರಿ ಈರಣ್ಣ ಗುಡದಾರಿ ಸ್ವಾಗತಿಸಿದರು. ಚಂದನಗೌಡ ಪಾಟೀಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net