ಜೀವನದಲ್ಲೂ ಕ್ರೀಡಾ ಮನೋಭಾವ ರೂಢಿಸಿಕೊಳ್ಳಿ

4 ckm 1
ಚಿಕ್ಕಮಗಳೂರಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಪಂ, ತಾಪಂ, ಶಾಲಾ ಶಿಕ್ಷಣ ಇಲಾಖೆ ಹಾಗೂ ದಂಟರಮಕ್ಕಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಸಬಾ ೩ ವಲಯ ಮಟ್ಟದ ಕ್ರೀಡಾಕೂಟವನ್ನು ಕ್ಷೇತ್ರಶಿಕ್ಷಣಾಧಿಕಾರಿ ರುದ್ರಪ್ಪ ಥ್ರೋ ಬಾಲ್ ಎಸೆಯುವ ಮೂಲಕ ಉದ್ಘಾಟಿಸಿದರು. ಮಹೇಶ್, ಇಸ್ಮಾಯಿಲ್, ರುಕ್ಸಾನಾ, ಅಜಯ್, ಕಿರಣ್, ಸುಂದರೇಶ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಕ್ರೀಡಾ ಮನೋಭಾವ ಮಕ್ಕಳಿಗೆ ಕೇವಲ ಶಾಲಾ ಅವಧಿಗೆ ಮಾತ್ರ ಸೀಮಿತವಾಗಬಾರದು. ಜೀವನದಲ್ಲಿಯೂ ಕ್ರೀಡಾ ಮನೋಭಾವ ರೂಡಿಸಿಕೊಂಡರೆ ಭವಿಷ್ಯದಲ್ಲಿ ಯಶಸ್ವಿ ವ್ಯಕ್ತಿಗಳಾಗಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ತಿಳಿಸಿದರು.

ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಪಂ, ತಾಪಂ, ಶಾಲಾ ಶಿಕ್ಷಣ ಇಲಾಖೆ ಹಾಗೂ ದಂಟರಮಕ್ಕಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಸಬಾ ೩ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡಾಪಟುಗಳು ತಾವು ಭಾಗವಹಿಸುವ ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ತಮ್ಮ ಪ್ರತಿಭೆ ಅನಾವರಣಗೊಳಿಸಿಕೊಳ್ಳಬೇಕು ಎಂದರು.

ಇತ್ತೀಚಿನ ವರ್ಷಗಳಲ್ಲಿ ಮಕ್ಕಳು ಸರಿಯಾಗಿ ಊಟ ಮಾಡುವುದಿಲ್ಲ ಎಂದು ಅವರನ್ನು ಡಾಕ್ಟರ್ ಬಳಿ ಕರೆದುಕೊಂಡು ಹೋಗುವ ಪಾಲಕರು ಹೆಚ್ಚಾಗಿದ್ದಾರೆ. ಇಂದಿನ ಮಕ್ಕಳಿಗೆ ದೈಹಿಕ ಚಟುವಟಿಕೆ ಇಲ್ಲದಿರುವುದೇ ಈ ರೀತಿಯ ಸಮಸ್ಯೆಗಳಿಗೆ ಕಾರಣ. ಮಕ್ಕಳಿಗೆ ದೈಹಿಕ ಶ್ರಮ ಇರುವಂತ ಆಟಗಳಲ್ಲಿ ತೊಡಗಿಸುವಂತೆ ಮಾಡಬೇಕಿದೆ. ಆಗ ಮಕ್ಕಳು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗುವ ಜೊತೆಗೆ ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಮಹೇಶ್ ಮಾತನಾಡಿ, ನಮ್ಮ ಇಂದಿನ ಆಹಾರ ಪದ್ಧತಿಯಿಂದಾಗಿ ರೋಗಗಳು ಹೆಚ್ಚಾಗುತ್ತಿವೆ. ಹೀಗಾಗಿ ಪಾಲಕರು ತಮ್ಮ ಮಕ್ಕಳಿಗೆ ನೀಡುವ ಆಹಾರದ ಬಗ್ಗೆ ಕಾಳಜಿ ವಹಿಸಬೇಕು. ಜೊತೆಗೆ ಮಕ್ಕಳನ್ನು ಪ್ರತಿದಿನ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಮಕ್ಕಳನ್ನು ಹೆಚ್ಚು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಬೇಕು ಎಂದು ಸಲಹೆ ನೀಡಿದರು.

ಕ್ರೀಡಾಕೂಟಗಳು ಯಶಸ್ವಿಯಾಗಲು ಮೂಲ ಕಾರಣ ಸಿಆರ್ ಪಿ ಗಳು. ಇವರೊಂದಿಗೆ ಮಳೆಯನ್ನು ಲೆಕ್ಕಿಸದೆ ದೈಹಿಕ ಶಿಕ್ಷಕರು ಉತ್ತಮವಾಗಿ ಕ್ರೀಡಾಕೂಟ ನಡೆಸಿಕೊಟ್ಟಿದ್ದಾರೆ. ಮಕ್ಕಳಿಗೂ ತೊಂದರೆಯಾಗದ ರೀತಿಯಲ್ಲಿ ಕ್ರೀಡಾಕೂಟ ನಡೆಸಿದ ಸಂತೋಷವಿದೆ. ಆ. ೧೮ರಂದು ನಡೆಯಬೇಕಾಗಿದ್ದ ಕ್ರೀಡಾಕೂಟ ಸೆ. ೪ರಂದು ನಡೆಯುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದಂಟರಮಕ್ಕಿ ಉರ್ದು ಶಾಲೆ ಎಸ್ ಡಿಎಂಸಿ ಅಧ್ಯಕ್ಷ ಇಸ್ಮಾಯಿಲ್, ಮುಖ್ಯ ಶಿಕ್ಷಕಿ ರುಕ್ಸಾನಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಅಜಯ್, ಗೌರವಾಧ್ಯಕ್ಷ ಕಿರಣ್, ಪ್ರಮುಖರಾದ ಸುಂದರೇಶ್, ಜಾನಕಿ, ಶಂಕರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net