ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳಿ

web 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಂದಿನ ವಿದ್ಯಾರ್ಥಿಗಳು ಮೋಬೈಲ್‌ಗೆ ಹೆಚ್ಚು ಅಂಟಿಕೊಂಡಿರುವುದರಿಂದ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಮಹಾತ್ಮರ ಪುಸ್ತಕಗಳನ್ನು ಓದುವುದರಿಂದ ಬದುಕಿನಲ್ಲಿ ಬದಲಾವಣೆ ಹಾಗೂ ಜ್ಞಾನ ಪಡೆಯಬಹುದು. ಪುಸ್ತಕಗಳೇ ವಿದ್ಯಾರ್ಥಿಗಳ ಮಿತ್ರನಾಗಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಹೇಳಿದರು.
ನಗರದ ವಿದ್ಯಾರಣ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿ ಒಕ್ಕೂಟ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಜೀವನದಲ್ಲಿ ಯಾವುದೇ ಸಮಸ್ಯೆಗೆ ಹೆದರದೆ ಮುನ್ನುಗ್ಗಬೇಕು. ಗ್ರಾಮೀಣ ಪ್ರದೇಶದಿಂದ ಬಂದವರೆಂದು ಕೀಳರಿಮೆ ಬೇಡ, ಮನಸ್ಸಿದ್ದರೆ ಎಲ್ಲವನ್ನು ಸಾಧಿಸಬಹುದು. ಜೀವನದಲ್ಲಿ ಒಳ್ಳೆ ಸಂಸ್ಕಾರ ಮತ್ತು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ದುಶ್ಚಟಗಳಿಂದ ದೂರವಿರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆ.ಬಿ.ಕುಲಕರ್ಣಿ ಮಾತನಾಡಿ, ನಿರಂತರ ಓದು ಮತ್ತು ಪ್ರಯತ್ನದಿಂದ ವಿದ್ಯಾರ್ಥಿಗಳು ಒಳ್ಳೆ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯ. ಮುಂಬರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ವಸಂತ ಮುರ್ಡೇಶ್ವರ, ರಮೇಶ ಮಾಗ, ಪ್ರದೀಪ ಪಾಟೀಲ, ಶ್ವೇತಾ ನಾಯಕ, ಕರುಣಾ ಕುಲಕರ್ಣಿ, ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಇತರರು ಇದ್ದರು.
ಪ್ರಾಚಾರ್ಯ ಡಾ. ಶರಣಮ್ಮ ಗೊರೇಬಾಳ ಸ್ವಾಗತಿಸಿದರು. ಡಾ. ಭರತ ನಾಯಕ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಸದಾನಂದ ಶಿಂತ್ರೆ ನಿರೂಪಿಸಿದರು. ಶಿವಪ್ಪ ಗಾಣಿಗೇರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net