

ಕಳಸ: ಗಾಂಧಿ ಜಯಂತಿಯನ್ನು ಕೇವಲ ಒಂದು ದಿನ ಆಚರಿಸಿದರೆ ಸಾಲದು. ಅವರ ತತ್ವಗಳನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಕನಸಿನ ಭಾರತವನ್ನು ಶಾಂತಿಯುತ ಮತ್ತು ಸಮ ಸಮಾಜವನ್ನು ನಿರ್ಮಿಸಲು ನಾವು ಪ್ರಯತ್ನಿಸಬೇಕು ಎಂದು ಕಳಸ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿ ಅಧ್ಯಕ್ಷೆ ಕಿರಣ ಬ್ರಹ್ಮದೇವ ಹೇಳಿದರು.
ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿಯಿಂದ ಗಾಂಧಿ ಜಯಂತಿ ಪ್ರಯುಕ್ತ ವೃದ್ಧೆರಿಯಗೆ ವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧಿ ವಿಶ್ವದ ಮುಂದೆ ಅಹಿಂಸೆಯ ಮೂರ್ತಿ. ಸತ್ಯದ ಧರ್ಮಾವಲಂಬಿ ಹಾಗೂ ಮಾನವತೆಯ ಸಂಕೇತವಾಗಿ ಹೊರಹೊಮ್ಮಿದವರು ಎಂದು ಹೇಳಿದರು.
ಉದ್ಯಮಿ ಜಯಕುಮಾರ್ ಭಟ್ ಮಾತನಾಡಿ, ಸತ್ಯ, ಧರ್ಮ, ನ್ಯಾಯ, ನಿಷ್ಠೆಯಿಂದ ನಡೆಯಬೇಕು ಎಂದು ಗಾಂಧಿ ಹೇಳಿದರು. ಆದರೆ ಈಗ ಅವುಗಳಿಗೆಲ್ಲ ಉಳಿಗಾಲ ಇಲ್ಲದಂತಾಗಿದೆ. ಅಧರ್ಮ ತಾಂಡವವಾಡುತ್ತಿದೆ. ಇದು ಬದಲಾಗಬೇಕಿದೆ ಎಂದು ಹೇಳಿದರು.
ನೂರಕ್ಕೂ ಹೆಚ್ಚು ವೃದ್ಧೆಯರಿಗೆ ಸೀರೆ ವಿತರಿಸಲಾಯಿತು. 10ನೇ ತರಗತಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವೃದ್ಧೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ನೀಡಲಾಯಿತು.
ಮಂಡಳಿ ಗೌರವಾಧ್ಯಕ್ಷೆ ಚಂಪಾ ಎಂ. ರಾವ್, ನಿರ್ದೇಶಕಿ ಫಾತಿಮಾ ರೆಹಮಾನ್, ಕಾರ್ಯದರ್ಶಿ ಆಶಾ ಗುರು ಶೇಟ್, ಸುಜಯಾ ಸದಾನಂದ, ಕಲ್ಪನಾ ಅಜಿತ್, ಶೋಭಾ ದೇಸಾಯಿ ಇತರರಿದ್ದರು.