ಜೀವನದಲ್ಲಿ ಉತ್ತೀರ್ಣಕ್ಕೆ ಕೌಶಲ ಇರಲಿ

20240113152437_IMG_9444
Published on

ಕಲಬುರಗಿ: ಭವಿಷ್ಯದ ನಾಗರಿಕರಾದ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪಾಸಾಗುವುದು ಸುಲಭ. ಜೀವನದ ಪರೀಕ್ಷೆಯಲ್ಲಿ ಪಾಸಾಗುವುದು ಕಷ್ಟ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಶರಣಪ್ಪ ಮುಳೆಗಾಂವ ಹೇಳಿದರು.

ನಗರದ ನೀಲಾಂಬಿಕಾ ಕಲ್ಯಾಣ ಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ಮಾತೋಶ್ರೀ ಕಲ್ಯಾಣಿ ಸ್ಮಾರಕ ಶಿಕ್ಷಣ ಸಂಸ್ಥೆಯ ಶ್ರೀಗುರು ಸ್ವತಂತ್ರ ವಿಜ್ಞಾನ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿ, ಧನಾತ್ಮಕ ಕೌಶಲ ಅಳವಡಿಸಿಕೊಂಡರೆ ಜೀವನದಲ್ಲೂ ಉತ್ತೀರ್ಣರಾಗಲು ಸಾಧ್ಯ ಎಂದರು.

ಸಮಾಜಕ್ಕೆ ಉತ್ತಮ ಕೊಡುಗೆ ನೀಡಿ, ಭವಿಷ್ಯದ ಭಾರತ ನಿರ್ಮಾಣಕ್ಕೆ ಶ್ರಮಿಸಬೇಕು. ಸಾಧನೆಯ ಹಾದಿಯಲ್ಲಿ ಶಕ್ತಿ ಹೀನರಿಗೆ ದೇವರೂ ಕೈಹಿಡಿಯುವುದಿಲ್ಲ. ಶಕ್ತಿವಂತರು ಯಶಸ್ಸು ಸಾಧಿಸುತ್ತಾರೆ. ಹೆತ್ತವರನ್ನು, ಗುರುಗಳನ್ನು ಗೌರವಿಸಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಶೈಕ್ಷಣಿಕ ಬುನಾದಿ ಹಾಕಿಕೊಟ್ಟ ದಿ.ಪ್ರೊ.ಎ.ವೈ.ನಾಯ್ಕ್ ಅವರ ಕೊಡುಗೆ ಅಪಾರ ಎಂದು ಹೇಳಿದರು.

ಪ್ರಾಂಶುಪಾಲ ವಿದ್ಯಾಸಾಗರ ಗೋಗಿ ಮಾತನಾಡಿ, ನೀವು ಕಲಿತ ಜ್ಞಾನ, ವಿದ್ಯೆ ಸಂದರ್ಭಕ್ಕನುಸಾರವಾಗಿ ಉಪಯೋಗಿಸಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳಬೇಕು. ತಂದೆ ತಾಯಿಯ ಕನಸು ನನಸಾಗಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಸಂಸ್ಥೆ ಅಧ್ಯಕ್ಷೆ ನಳಿನಿ ಎ.ನಾಯ್ಕ್ ಮಾತನಾಡಿ, ವಿದ್ಯಾರ್ಥಿಗಳು ಏಕಾಗ್ರತೆಯಿಂದ ಓದಿ, ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರಬೇಕು. ಅದಕ್ಕೆ ಪೂರಕ ಎಲ್ಲ ಶೈಕ್ಷಣಿಕ ಸಹಕಾರ ಸೌಲಭ್ಯ ನೀಡುವುದಾಗಿ ಭರವಸೆ ನೀಡಿದರು.

ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಕಾರ್ಯದರ್ಶಿ ನಿತಿನ್ ನಾಯ್ಕ್, ಆಡಳಿತಾಧಿಕಾರಿ ನೇಹಾ ನಾಯ್ಕ್, ಆಡಳಿತ ಮಂಡಳಿ ಸದಸ್ಯ ಗುರುರಾಜ ನಾಯ್ಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net