

ಮಳವಳ್ಳಿ: ನಾನೊಬ್ಬ ರೈತನ ಮಗನಾಗಿ ಶಾಸನ ರಚಿಸುವ ಆಡಳಿತದಲ್ಲಿ ಸೇವೆ ಮಾಡಲು ಜನರ ಆಶೀರ್ವಾದದ ಜತೆಗೆ ಶಿಕ್ಷಣವೇ ಕಾರಣವಾಗಿದೆ ಎಂದು ಶಾಸಕ ಡಾ.ಕೆ.ಅನ್ನದಾನಿ ಹೇಳಿದರು.
ತಾಲೂಕಿನ ಭೀಮನಹಳ್ಳಿ ಗ್ರಾಮದಲ್ಲಿ ಬುಧವಾರ ಸರ್ಕಾರಿ ಪ್ರೌಢಶಾಲಾ ಹೆಚ್ಚುವರಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಐಶ್ವರ್ಯ, ಅಂತಸ್ತುಗಳನ್ನು ಕಳೆದುಕೊಳ್ಳಬಹುದು, ಆದರೆ ಯಾರೂ ಕಸಿಯಲಾಗದ ಸಂಪತ್ತು ಎಂದರೆ ಶಿಕ್ಷಣ ಮಾತ್ರ. ಪ್ರಸ್ತುತ ಕಾಲಗಟ್ಟದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಅಕ್ಷರ ಕಲಿಕೆ ಜೀವನದಲ್ಲಿ ಬಹುಮುಖ್ಯವಾಗಿದೆ. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರಿಂದ ಶೈಕ್ಷಣಿಕವಾಗಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ಮೌಲ್ಯಧಾರಿತ ಮತ್ತು ಆತ್ಮಸ್ಥೈರ್ಯವನ್ನು ಹೆಚ್ಚಿಸುವಂತ ಶಿಕ್ಷಣ ದೊರೆಯಲಿದ್ದು, ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹವನ್ನು ಬಿಟ್ಟು ನಿಮ್ಮೂರಿನಲ್ಲಿರುವ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವುದರ ಜತೆಗೆ ಶಾಲಾ ಅಭಿವೃದ್ಧಿಗೆ ಪ್ರೋತ್ಸಾಹ ನೀಡುವಂತೆ ಮನವಿ ಮಾಡಿದರು.
ಬಿಇಒ ನಾಗರಾಜು ಮಾತನಾಡಿ, ಶಿಕ್ಷಣ ವ್ಯವಸ್ಥೆಯಲ್ಲಿ ಹಿನ್ನೆಡೆಯಾದರೆ ದೇಶದ ಅಭಿವೃದ್ಧಿ ಕುಂಟಿತವಾಗುತ್ತದೆ. ಆದ್ದರಿಂದಲೇ ಡಾ.ಅಂಬೇಡ್ಕರ್ ಸಂವಿಧಾನದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದರು.
ಗ್ರಾಮ ಪಂಚಾಯತಿ ಅಧ್ಯಕ್ಷ ದಿಲೀಪ್, ಉಪಾಧ್ಯಕ್ಷೆ ಗಾಯಿತ್ರಿ, ಸದಸ್ಯರಾದ ಕಾಂತರಾಜೇ ಅರಸ್, ಚೆನ್ನಾಜಿ, ಲಕ್ಷ್ಮೀ, ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ಪುಟ್ಟುಬುದ್ದಿ, ಮುಖ್ಯ ಶಿಕ್ಷಕ ನಾಗರಾಜ್, ಮುಖಂಡರಾದ ಮಹೇಶ್, ದೇವರಾಜು, ಪಟೇಲ್ ಸ್ವಾಮಿ ಇತರರಿದ್ದರು.