ಜೀವನದ ಯಶಸ್ಸಿಗೆ ಗುರು ಮುಖ್ಯ

9 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಒಬ್ಬ ವಿದ್ಯಾರ್ಥಿ ಯಶಸ್ಸಿನ ಹಿಂದೆ ವಿದ್ಯಾಗುರು ಹಾಗೂ ಗ್ರಂಥಪಾಲಕರ ಪಾತ್ರ ಹೆಚ್ಚಿರುತ್ತದೆ ಎಂದು ವಿಶ್ರಾಂತ ಪ್ರಾಚಾರ್ಯ ಡಾ. ಎಸ್.ಬಿ. ದಳವಾಯಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ವೀರಪ್ಪ ವೀರಭದ್ರಪ್ಪ ನಾಗಶೆಟ್ಟಿ ದತ್ತಿ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ವೀರಪ್ಪ ನಾಗಶೆಟ್ಟಿ ಅವರ ಜೀವನ ಮತ್ತು ಸಾಧನೆ ಕುರಿತು ಉಪನ್ಯಾಸ ನೀಡಿದರು.
ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ನಾಗಶೆಟ್ಟಿ ಅವರ ಸ್ವಾತಂತ್ರೃ ಪೂರ್ವದಲ್ಲನ ದೃಷ್ಟಿಕೋನವು ಅವರ ಅವರ ಕೃತಿಗಳಿಂದ ತಿಳಿದು ಬರುತ್ತದೆ. ಸ್ವಸ್ಥ ಸಮಾಜ ನಿರ್ಮಿಸುವಲ್ಲಿ ತೊಡಗಿಸಿಕೊಂಡ ವ್ಯಕ್ತಿಗಳಿಗೆ ಸಿಗುತ್ತಿದ್ದ ಆ ಗೌರವ ಇಂದಿನ ದಿನಗಳಲ್ಲಿ ಸಿಗದೆ ಹೋಗುತ್ತಿರುವುದು ವಿಷಾದನೀಯ ಎಂದರು.
ಬಹುಮುಖ ಪ್ರತಿಭೆಯ ಆದರ್ಶ ಶಿಕ್ಷಕರಾಗಿದ್ದ ವೀರಪ್ಪ ನಾಗಶೆಟ್ಟಿ, ಹಲವು ಮೌಲ್ಯಯುತ ಸಾಹಿತ್ಯ ಪ್ರಕಾರಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದವರು. ಮಾನವೀಯ ಮೌಲ್ಯ ಹೆಚ್ಚಿಸುವಲ್ಲಿ ಸ್ವಾತಂತ್ರೃ ಪೂರ್ವದ ಶಿಕ್ಷಕರು ಮತ್ತು ಇಂದಿನ ಶಿಕ್ಷಕರ ವ್ಯತ್ಯಾಸ ಕುರಿತು ಮಾಹಿತಿ ನೀಡಿದರು.
ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ಸ್ಥಾನ ಪಡೆದ ಕಿತ್ತೂರಿನ ಎಸ್.ಜಿ. ಹೈಸ್ಕೂಲ್ ವಿದ್ಯಾರ್ಥಿ ವಿಶಾಲ ಗುದಗಿ ಹಾಗೂ ವಿಶ್ರಾಂತ ಗ್ರಂಥಾಲಯಾಧಿಕಾರಿ ಜಿ.ಬಿ. ಹೊಂಬಳ ಅವರನ್ನು ಸನ್ಮಾನಿಸಲಾಯಿತು.
ದತ್ತಿದಾನಿ ಅಕ್ಕಮಹಾದೇವಿ ನಾಗಶೆಟ್ಟಿ, ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ, ಡಾ. ಧನವಂತ ಹಾಜವಗೋಳ, ರಾಜಶೇಖರ ನಾಗಶೆಟ್ಟಿ, ಎಸ್.ಎಸ್. ಬಣಕಾರ, ಬಿ.ಡಿ. ಪಾಟೀಲ, ಸಿ.ಎಸ್. ಪಾಟೀಲ, ನಿಂಗಣ್ಣ ಕುಂಟಿ, ಸಿ.ಎಸ್. ಪೊಲೀಸಪಾಟೀಲ, ಡಾ. ಮಲ್ಲಿಕಾರ್ಜುನ ಪಾಟೀಲ, ಇತರರು ಇದ್ದರು.
ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ವಿಶ್ವೇಶ್ವರಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರು ಹಿರೇಮಠ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net