

ಚಿತ್ರದುರ್ಗ: ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಕ್ರೀಡಾ ಚಟಕುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಭಿಪ್ರಾಯಪಟ್ಟರು.
ಜಿಲ್ಲಾ ಪೊಲೀಸ್ ಇಲಾಖೆ ನಗರದ ಡಿಎಆರ್ ಮೈದಾನದಲ್ಲಿ ಹಮ್ಮಿಕೊಂಡಿರುವ 3 ದಿನಗಳ ಅಫಿಷಿಯಲ್ ಕ್ರಿಕೆಟ್ ಕಪ್ ಟೂರ್ನಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಮನಸ್ಸು ಸದಾ ಚೈತನ್ಯದಿಂದಿರಲು, ಆಸಕ್ತಿಯಿಂದ ಕರ್ತವ್ಯ ನಿರ್ವಹಿಸಲು ಕ್ರೀಡೆಗಳು ನೆರವಾಗುತ್ತವೆ. ಸೋಲು-ಗೆಲುವು ಮುಖ್ಯವಲ್ಲ, ಪಂದ್ಯಗಳಲ್ಲಿ ಪಾಲ್ಗೊಳ್ಳುವುದು ಮುಖ್ಯ. ಕ್ರಿಕೆಟ್ ಟೂರ್ನಿ ಆಯೋಜಿಸಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಮಾತನಾಡಿ, ಪ್ರತಿಯೊಬ್ಬರಲ್ಲೂ ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ಇದರಿಂದ ಉತ್ತಮ ಗೆಳೆತನ, ಬಾಂಧವ್ಯ ವೃದ್ಧಿಯಾಗಲಿದೆ ಎಂದು ಹೇಳಿದರು.
ಜನರಿಗೆ ಸರ್ಕಾರಿ ಸೇವೆಗಳನ್ನು ಸಮರ್ಪಕವಾಗಿ ತಲುಪಿಸಲು, ಇಲಾಖೆಗಳ ನಡುವಿನ ಸೌಹಾರ್ದ, ಸಮನ್ವಯತೆಗೆ ಕ್ರೀಡಾಕೂಟಗಳು ಸಹಕಾರಿಯಾಗುತ್ತವೆ ಎಂದರು.
ಎಎಸ್‌ಪಿ ಎಸ್‌ಜೆ ಕುಮಾರಸ್ವಾಮಿ, ಡಿವೈಎಸ್‌ಪಿಗಳಾದ ಪಿ.ಕೆ. ದಿನಕರ್, ಉಮೇಶ್‌ನಾಯಕ್, ಗಣೇಶ್ ಮತ್ತಿತರ ಪೊಲೀಸ್ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿ, ನೌಕರರು ಹಾಗೂ ಪತ್ರಕರ್ತರ ಸಹಿತ 16 ತಂಡಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿವೆ.
ಇದೇ ವೇಳೆ ಸಚಿವರು ತಮ್ಮ ಶಾಸಕರ ನಿಧಿಯಿಂದ ಮಂಜೂರು ಮಾಡಿದ್ದ ನಾಲ್ಕು ಬೊಲೆರೊ ವಾಹನಗಳನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಿದರು. ಒಂದು ವಾಹನದಲ್ಲಿ ಎಸ್‌ಪಿ ಮತ್ತಿತರ ಅಧಿಕಾರಿಗಳನ್ನು ಕೂರಿಸಿಕೊಂಡು ಟೆಸ್ಟ್ ಡ್ರೈವ್ ಮಾಡಿದರು.