ಜೀವನದ ಮೌಲ್ಯ ಹೆಚ್ಚಿಸುವ ಕೆಲಸ ಮಾಡಿದೆ ವಚನ ಸಾಹಿತ್ಯ

mysore
Published on

ಮೈಸೂರು: ವಚನ ಸಾಹಿತ್ಯ ಎಲ್ಲದಕ್ಕೂ ಸೂಕ್ಷ್ಮವಾಗಿ ಸ್ಪಂದಿಸಿದೆ. ಆ ಮೂಲಕ ಜೀವನದ ಮೌಲ್ಯವನ್ನು ಹೆಚ್ಚಿಸುವ ಕೆಲಸ ಮಾಡಿದೆ ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಪ್ರಕಟಣಾ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಹೇಳಿದರು.

ಮೈಸೂರು ಜಿಲ್ಲಾ ಹಾಗೂ ನಂಜನಗೂಡು ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಹುಲ್ಲಹಳ್ಳಿಯ ಜೆಎಸ್‌ಎಸ್ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ದೇವಮ್ಮ ಹೊನ್ನಪ್ಪ ಕೆಬ್ಬೇಪುರ ದತ್ತಿ, ಗೌರಮ್ಮ ಎಂ.ಬಸಪ್ಪ ಅರಳಿಕಟ್ಟೆ ದತ್ತಿ ಉಪನ್ಯಾಸದಲ್ಲಿ ‘ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು‘ ಕುರಿತು ಮಾತನಾಡಿದರು.

ಬಸವಣ್ಣ ಅವರು ಮನೋವಿಜ್ಞಾನಿ, ತತ್ವಜ್ಞಾನಿ. ಸಣ್ಣ, ಸಣ್ಣ ಸಂಗತಿಗಳ ಮೂಲಕವೇ ಸಮಾಜದ ಸತ್ವವನ್ನು ಹೆಚ್ಚಿಸುವ ಕೆಲಸ ಮಾಡಿದರು. ಮೌಲ್ಯ ಬದುಕಿಗೆ ಸಂಬಂಧಿಸಿದ್ದು, ಬಸವಾದಿ ಶರಣರು ಸೂಕ್ಷ್ಮವಾಗಿ ಬದುಕನ್ನು ಗಮನಿಸುತ್ತಿದ್ದರು. ಹೀಗಾಗಿ ಶರಣರ ಕಾಳಜಿಯನ್ನು ಅರ್ಥ ಮಾಡಿಕೊಂಡು ನಮ್ಮಲ್ಲಿರುವ ಅಪೂರ್ವ ಶಕ್ತಿ, ಸಾಮರ್ಥ್ಯವನ್ನು ಬಳಸಬೇಕು. ಬದುಕಿನ ಮೌಲ್ಯ ನಮ್ಮೊಂದಿಗೆ ಗುರುತಿಸುವ ಕೆಲಸ ಮಾಡಬೇಕು. ಈ ಮೂಲಕ ಘನ ಬದುಕನ್ನು ಸಾಗಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಬಸವಾದಿ ಶರಣರು ಸಣ್ಣ, ಸಣ್ಣ ಸಂಗತಿಗಳ ಮೂಲಕವೂ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ ಎಂದರು.

13-19ರ ವಯಸ್ಸು ಹದಿಹರೆಯದ್ದು, ಓದುವುದು ತಪಸ್ಸು ಎಂಬಂತೆ ಶ್ರದ್ಧೆ ಮತ್ತು ನಿಷ್ಟೆಯಿಂದ ಮಾಡಬೇಕು. ಈ ಹಂತದಲ್ಲಿ ಶಿಕ್ಷಕರು ಬೌದ್ಧಿಕ, ಭಾವನಾತ್ಮಕ, ಆಧ್ಯಾತ್ಮಿಕವಾಗಿ ಕಲಿಸಬೇಕು. ಬಸವಾದಿ ಶರಣರ ಕಾಲದಲ್ಲಿ ಅನುಭವ ಮಂಟಪ ಓದುವ- ಕೇಳುವ ವೇದಿಕೆಯಾದಂತೆ ಪ್ರಸ್ತುತ ವಿದ್ಯಾರ್ಥಿಗಳಲ್ಲಿ ಕೇಳುವ, ಸಂಸ್ಕಾರ, ಸಂಸ್ಕೃತಿ ಬೆಳೆಯಬೇಕು. ಇದಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ಗುರುಗಳು ತಯಾರು ಮಾಡಬೇಕು ಎಂದು ಹೇಳಿದರು

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಮಾತನಾಡಿ, ವಿದ್ಯಾರ್ಥಿಗಳು ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಜತೆಗೆ ಇಂಗ್ಲಿಷ್ ಕಲಿಯಬೇಕು. ಹೊಸ ಹೊಸ ಕ್ಷೇತ್ರಗಳ ಅನುಭವ ಪಡೆಯಬೇಕು. ಈ ರೀತಿಯಾದಲ್ಲಿ ಮಾತ್ರ ಉದ್ಯೋಗಾವಕಾಶಗಳು ಸಿಗುತ್ತವೆ ಎಂದರು.

ವಚನ ಸಾಹಿತ್ಯ ಓದುವ ಮೂಲಕ ಅದರಲ್ಲಿರುವ ವೈಚಾರಿಕತೆ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಸಮಾನತೆ, ಮಾನವೀಯತೆ, ಸ್ತ್ರೀ ಸಮಾನತೆ, ಸತ್ಯ, ಅಹಿಂಸೆ, ನಿಸ್ವಾರ್ಥ, ಪ್ರೀತಿ, ತ್ಯಾಗ, ಸ್ನೇಹ, ಪ್ರಾಮಾಣಿಕತೆ, ಕಾಯಕ, ದಾಸೋಹ- ಈ ಎಲ್ಲ ಅಂಶಗಳು ವಚನ ಸಾಹಿತ್ಯದಲ್ಲಿ ಅಡಕವಾಗಿವೆ ಎಂದರು.

ವಚನಗಳಲ್ಲಿ ಜೀವನ ಮೌಲ್ಯ ಅಡಗಿವೆ. ಪ್ರತಿಯೊಬ್ಬರೂ ನೆಮ್ಮದಿಯಿಂದ ಜೀವಿಸಲು ಬೇಕಾದ ಸಂಸ್ಕಾರ, ಸಂಸ್ಕೃತಿ ಇದೆ. ಆ ಮೌಲ್ಯ ಅಳವಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.

ನಂಜನಗೂಡು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ ಮಾತನಾಡಿ, ಪ್ರಸ್ತುತ ದೃಶ್ಯ ಮಾಧ್ಯಮ ಹಾಗೂ ಮೊಬೈಲ್ ಹಾವಳಿ ನಡುವೆ ಶರಣರ ಸಂದೇಶಗಳನ್ನು ತಿಳಿದು ನೀತಿ ನೆಲೆಗಟ್ಟಿನ ಮೇಲೆ ಜೀವನ ಸಾಗಿಸಬೇಕು ಎಂದು ತಿಳಿಸಿದರು.

ದತ್ತಿ ದಾಸೋಹಿಯಾದ ನಿವೃತ್ತ ಉಪನ್ಯಾಸಕ ಎಚ್. ರಾಜು ಕೆಬ್ಬೇಪುರ ಮಾತನಾಡಿ, ಬಸವಣ್ಣ ಅವರ ಸಾಹಿತ್ಯ ಕಾಲ್‌ಮಾರ್ಕ್ಸ್‌ನ ದಾಸ್ ಕ್ಯಾಪಿಟಲ್‌ಗಿಂತಲೂ ಮಿಗಿಲಾದುದು. ವರ್ಣ ಹಾಗೂ ವರ್ಗಭೇದದ ವಿರುದ್ಧ ಅಂಥ ಕ್ರಾಂತಿಕಾರಿ ಸಂದೇಶಗಳು ವಚನ ಸಾಹಿತ್ಯದಲ್ಲಿ ಇವೆ ಎಂದು ಹೇಳಿದರು.

ಜೆಎಸ್‌ಎಸ್ ಪ್ರೌಢಶಾಲಾ ಮುಖ್ಯ ಶಿಕ್ಷಕ ಮಹದೇವಸ್ವಾಮಿ, ಜೆಎಸ್‌ಎಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಪಿ. ರೇವಣ್ಣ, ಶೈಲಜಾ, ಶಿವಲಿಂಗಪ್ಪ, ರಾಜಪ್ಪ, ಸಿದ್ದಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್, ಉಪನ್ಯಾಸಕ ಎ.ಎಂ. ಶಿವಕುಮಾರಸ್ವಾಮಿ, ಉಪನ್ಯಾಸಕ ಆರ್.ಬಿ. ಪುಟ್ಟಮಾದಪ್ಪ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net