

ಲಕ್ಷ್ಮೇಶ್ವರ: ಸಾಮೂಹಿಕ ವಿವಾಹ ಎಂದರೆ ಅದು ಕೇವಲ ಬಡ ಜನರ ಮದುವೆ ಕಾರ್ಯಕ್ರಮ ಎಂದು ಭಾವಿಸುವುದು ತಪ್ಪು. ಪವಿತ್ರವಾದ ಧಾರ್ವಿುಕ ಕ್ಷೇತ್ರದಲ್ಲಿ ಭಗವಂತನ ಸಾಕ್ಷಿಯಾಗಿ ಮಠಾಧೀಶರ, ಗುರುಹಿರಿಯರ ಆಶೀರ್ವಾದದೊಂದಿಗೆ ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಿರುವುದು ಜೀವನದ ಸಾರ್ಥಕತೆಯ ಕ್ಷಣವಾಗಿದೆ ಎಂದು ಹೂವಿನ ಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಪುಲಿಗೆರೆ ಅನ್ನದಾಸೋಹ ಯುವ ಬಳಗದಿಂದ ಭಾನುವಾರ ಆಯೋಜಿಸಿದ್ದ ಹಮ್ಮಿಕೊಳ್ಳಲಾಗಿದ್ದ ಬಡವ ಕಲ್ಯಾಣ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವಿವಾಹವೆಂದರೆ ಎರಡು ಮನಸ್ಸು, ಜೀವಗಳು ಒಂದಾಗಿ ಪರಸ್ಪರರು ಹಾಲು ಜೇನಿನಂತೆ ಕೂಡಿ ಬಾಳುವ ಪವಿತ್ರ ಬಂಧವಾಗಿದೆ. ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ದಂಪತಿಗಳು ಪರಸ್ಪರ ಪ್ರೀತಿ, ವಿಶ್ವಾಸದಿಂದ ತಂದೆ-ತಾಯಿ, ಅತ್ತೆ-ಮಾವ, ಗುರು ಹಿರಿಯರಲ್ಲಿ ಗೌರವ ಭಾವನೆ, ವಿಧೇಯತೆ, ತಾಳ್ಮೆಯಿಂದ ಆದರ್ಶಮಯ ಜೀವನಕ್ಕೆ ಅಣಿಯಾಗಬೇಕು. ಸಂಪ್ರದಾಯ, ಸಂಸ್ಕೃತಿ, ಧರ್ಮ ಮಾರ್ಗ ಮತ್ತು ಮಠಮಾನ್ಯಗಳ ಸತ್ಸಂಗದೊಂದಿಗೆ ಸಾತ್ವಿಕ ಜೀವನಕ್ಕೆ ಒಗ್ಗಿಕೊಳ್ಳಬೇಕು ಎಂದರು.
ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮಾತನಾಡಿ, ಅನವಶ್ಯಕ ದುಂದು ವೆಚ್ಚ, ಆಡಂಬರ, ವರದಕ್ಷಿಣೆ ತಡೆದು ಸಾಮೂಹಿಕ ವಿವಾಹದ ಮಹತ್ವ ಸಾರುವ ಉದ್ದೇಶದಿಂದ ಬಳಗದವರು ಮಾಡಿದ ಈ ಪುಣ್ಯಕಾರ್ಯ ಇತರರಿಗೆ ಪ್ರೇರಣೆಯಾಗಿದೆ. ಇಂತಹ ಶ್ರೇಷ್ಠ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಬೇಕು ಎಂದರು.
ಸೋಮೇಶ್ವರ ದೇವಸ್ಥಾನದಲ್ಲಿ ಪೂರ್ವನಿರ್ಧಾರಂತೆ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಕರೊನಾ ಭೀತಿಯ ಹಿನ್ನೆಲೆಯಲ್ಲಿ ತಹಸೀಲ್ದಾರರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದರು. ಅದರಂತೆ ಸೋಮೇಶ್ವರನ ಸನ್ನಿಧಿಯಲ್ಲಿ ವಧುವರರ ಸಂಬಂಧಿಕರು, ಪುರೋಹಿತರು, ಬಳಗದವರು ಎಲ್ಲರೂ ಸೇರಿ ನೂರಕ್ಕಿಂತ ಕಡಿಮೆ ಜನರ ಪಾಲ್ಗೊಳ್ಳುವಿಕೆಯಲ್ಲಿ ಸಂಪ್ರದಾಯದಂತೆ ಎಲ್ಲಾ ವಿಧಿವಿಧಾನಗಳ ಮೂಲಕ ಮೂರು ಜೋಡಿಗಳ ಮದುವೆ ಕಾರ್ಯಕ್ರಮ ನಡೆಸಲಾಯಿತು. ಮದುವೆ ನಂತರ ಊಟದ ವ್ಯವಸ್ಥೆ ಮಾಡಿರಲಿಲ್ಲ. ಕೇವಲ ಪ್ರಸಾದ ನೀಡಲಾಯಿತು.
ಈ ವೇಳೆ ಹಿರಿಯರಾದ ಚಂಬಣ್ಣ ಬಾಳಿಕಾಯಿ, ಸುರೇಶ ರಾಚನಾಯ್ಕರ, ಶಂಕರ ಬಾಳಿಕಾಯಿ, ಬಸವರಾಜ ಮೆಣಸಿನಕಾಯಿ, ಪುರಸಭೆ ಸದಸ್ಯೆ ಅಶ್ವಿನಿ ಅಂಕಲಕೋಟಿ, ರುದ್ರಪ್ಪ ನರೇಗಲ್ಲ, ಶಿವಯೋಗಿ ಅಂಕಲಕೋಟಿ, ಶಿವಜೋಗೆಪ್ಪ ಚಂದರಗಿ, ಶಿವಾನಂದ ಲಿಂಗಶೆಟ್ಟಿ, ಕಾಶಪ್ಪ ಮುಳಗುಂದ, ಶಿಗ್ಲಿಮಠ, ಅರ್ಚಕ ಸಮೀರ ಪೂಜಾರ, ಇತರರಿದ್ದರು.