ಮೈಸೂರು: ಆತ್ಮಸ್ಥೈರ್ಯ, ಮನೋಬಲದ ಸಾಕಾರ ಮೂರ್ತಿ ಹೆಣ್ಣು. ಭಾರತದ ಪುನರುತ್ಥಾನವು ಮಹಿಳೆಯರ ಏಳಿಗೆಯಿಂದ ಸಾಧ್ಯ ಎಂದು ವಿದ್ಯಾವರ್ಧಕ ಕಾನೂನು ಕಾಲೇಜಿನ ಪ್ರಾಧ್ಯಾಪಕಿ ಪ್ರೊ.ಎಂ.ಜೆ.ಇಂದುಮತಿ ಅಭಿಪ್ರಾಯಪಟ್ಟರು.
ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಲಘಟ್ಟ ಬದಲಾದಂತೆ ಮಹಿಳೆಯ ಸ್ಥಾನಮಾನ ಬದಲಾಗುತ್ತಾ ಬರುತ್ತಿದೆ. ಮಹಿಳೆಯರ ಹಕ್ಕು, ಮಹಿಳಾ ಸಬಲೀಕರಣ ಮತ್ತು ತನ್ನ ಜೀವನದ ಆಯ್ಕೆಯ ಸ್ವಾತಂತ್ರ್ಯ ಹೆಣ್ಣಿಗೆ ಇದೆ ಎಂದರು.
ಮಹಿಳಾ ದಿನ ಕೇವಲ ಒಂದು ದಿನದ ಆಚರಣೆ ಆಗಬಾರದು. 2001ನ್ನು ನಾವು ಮಹಿಳಾ ಸಬಲೀಕರಣದ ವರ್ಷವೆಂದು ಕರೆದಿದ್ದೇವೆ. ಹೆಣ್ಣು ಮಗುವಿಗೆ ತಾಯಿಯ ಗರ್ಭದಿಂದಲೇ ಹಕ್ಕು ಲಭಿಸುತ್ತದೆ.
ಯಾವ ದೇಶ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತದೋ ಆ ದೇಶ ಪ್ರಗತಿಯತ್ತ ಸಾಗುತ್ತದೆ ಎಂದು ಯುನೆಸ್ಕೋ ಹೇಳುತ್ತದೆ. ದೇಶದಲ್ಲಿ ಇಂದು ಐಎಎಸ್‌ನಂತಹ ಉನ್ನತ ಹುದ್ದೆಯಲ್ಲಿರುವ ಮಹಿಳಾ ಅಧಿಕಾರಿಗಳ ಸಂಖ್ಯೆ ಶೇ.14ರಷ್ಟು ಮಾತ್ರ ಇದ್ದು, ಇದು ಹೆಚ್ಚಾಗಬೇಕಾಗಿದೆ ಎಂದರು.
ನಮ್ಮ ಸಂವಿಧಾನದಲ್ಲಿ ಮಹಿಳೆಯರಿಗೆ ಹಕ್ಕು ಮತ್ತು ಸಮಾನತೆಗಳಿಗೆ ಹಲವಾರು ವಿಧಿಗಳಿವೆ. ಸಮಾನ ಕೆಲಸ ಸಮಾನ ವೇತನ-ಹೆಣ್ಣಿನ ಹಕ್ಕು ಮತ್ತು ಹೆಣ್ಣು ಮಾತೃತ್ವದ ಪ್ರಯೋಜನವನ್ನು ಪಡೆದಿದ್ದಾಳೆ. ಮಹಿಳೆಗೆ ಕಾನೂನಿನ ಉಚಿತ ನೆರವು ಸಹ ದೊರೆಯುತ್ತದೆ. ಮಹಿಳೆಯರ ಗೌರವವನ್ನು ನ್ಯಾಯಾಲಯಗಳು ಕಾಪಾಡುತ್ತಿವೆ. ಹೆಣ್ಣು ದಾಯಾದಿಯ ಸ್ಥಾನವನ್ನೂ ಪಡೆದಿದ್ದಾಳೆ. ಶೂನ್ಯ ವಿವಾಹದಲ್ಲಿ ಹೆಣ್ಣು ಶಾಶ್ವತ ಪ್ರಯೋಜನವನ್ನು ಪಡೆಯಬಹುದು ಎಂದು ತಿಳಿಸಿದರು.
ಪ್ರಾಂಶುಪಾಲ ಡಾ.ಎಸ್.ಮರೀಗೌಡ ಮಾತನಾಡಿ, ರಾಜಮ್ಮ ಎನ್ನುವ ಮಹಿಳೆ ಮರಣೋತ್ತರ ಪರೀಕ್ಷೆಯನ್ನು ಮಾಡುವ ಕಾಯಕವನ್ನು ಮಾಡುತ್ತಿದ್ದಾರೆ. ಇದು ಹೆಣ್ಣು ಎಲ್ಲ ರಂಗದಲ್ಲೂ ತನ್ನ ಪಾತ್ರವನ್ನು ನಿರ್ವಹಿಸುತ್ತಿದ್ದಾಳೆ ಎಂಬುದಕ್ಕೆ ಉದಾಹರಣೆಯಾಗಿದೆ ಎಂದರು.
ಮಹಿಳಾ ದಿನಾಚರಣೆಯ ಪ್ರಯುಕ್ತ ನಡೆದ ಕ್ರೀಡಾಕೂಟದಲ್ಲಿ ವಿಜೇತರಾದ ಮಹಿಳಾ ಅಧ್ಯಾಪಕ ಮತ್ತು ಅಧ್ಯಾಪಕೇತರರಿಗೆ ಬಹುಮಾನ ವಿತರಿಸಲಾಯಿತು. ಸ್ನಾತಕೋತ್ತರ ಎಂ.ಕಾಂ. ವಿಭಾಗದ ಮುಖ್ಯಸ್ಥೆ ಡಾ.ಎಸ್.ಪೂರ್ಣಿಮಾ, ವಾಣಿಜ್ಯ ಹಾಗೂ ನಿರ್ವಹಣಾ ಶಾಸ್ತ್ರ ವಿಭಾಗ ಮುಖ್ಯಸ್ಥೆ ಪ್ರೊ.ಎನ್.ಗೀತಾ, ಕಚೇರಿ ಅಧೀಕ್ಷಕಿ ಡಿ.ಸುನೀತಾ, ಪ್ರೊ.ಪ್ರೀತಿ, ಕಂಪ್ಯೂಟರ್ ಅಪ್ಲಿಕೇಷನ್ ವಿಭಾಗ ಮುಖ್ಯಸ್ಥೆ ಪ್ರೊ.ಸೌಮ್ಯಾ ಇದ್ದರು.