ಜೀವನದ ಅನುಭವವೇ ಅರಿವೇ ಗುರು

2 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಅರಿವು ಜ್ಞಾನದ ಬಲವಾಗಿದ್ದು, ನಮ್ಮನ್ನು ನಾವು ಅರಿಯುವುದು ನಿಜವಾದ ಅರಿವಾಗಿದೆ. ಜೀವನದ ಅನುಭವವೇ ಅರಿವೇ ಗುರು ಆಗಿದೆ. ಗುರು ಎಂಬ ಪದವು ತನ್ನದೇ ವಿಶಾಲತೆ ಹೊಂದಿದೆ ಎಂದು ಬೆಂಗಳೂರಿನ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿಶ್ವ ವಿದ್ಯಾಲಯವು ಶಿಕ್ಷಣ ತಜ್ಞರ ದಿನ ನಿಮಿತ್ತ ಕವಿವಿ ಸಿನೆಟ್ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ‘ಅರಿವೆ ಗುರು’ ವಿಷಯದ ಕುರಿತ ಡಾ. ಡಿ.ಸಿ.ಪಾವಟೆ ಸ್ಮಾರಕ ಮೂಲತತ್ವ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಜಗತ್ತಿನಲ್ಲಿ ಯುದ್ಧಗಳು ನಡೆಯುತ್ತಿರುವುದು ನೋವಿನ ಸಂಗತಿ. ಗಂಭೀರವಾಗಿ ಅರಿವೆ ಗುರು ವಿಷಯ ಕುರಿತು ಚರ್ಚೆ ನಡೆಯಬೇಕಿದೆ. ನಮ್ಮ ಹಿಂದಿನ ಶರಣರು ಅರಿವೇ ಗುರು ಎಂಬ ಧ್ಯೇಯವಾಕ್ಯ ನೀಡಿದ್ದಾರೆ ಎಂದ ಅವರು, ಕರ್ನಾಟಕ ವಿಶ್ವ ವಿದ್ಯಾಲಯ ಲಾಂಛನದಲ್ಲಿ ಅರಿವೇ ಗುರು ಎಂಬ ಧ್ಯೇಯ ವಾಕ್ಯ ಹೊಂದಿದ್ದು ವಿಶೇಷ. ಅನುಭವ ಮಂಟಪದ ಪರಿಕಲ್ಪನೆಯನ್ನು ವಿಶ್ವ ವಿದ್ಯಾಲಯಗಳು ಹೊಂದಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಪ್ರೊ. ಕೆ.ಬಿ.ಗುಡಸಿ ಮಾತನಾಡಿ, ವಿಶ್ವ ವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಶರಣರ ವಿಚಾರಗಳ ಕುರಿತು ಸಂಶೋಧನೆ ನಡೆಯಬೇಕಾಗಿದೆ. ಕರ್ನಾಟಕ ವಿಶ್ವ ವಿದ್ಯಾಲಯ ಕಟ್ಟಿ ಬೆಳೆಸಿದ ಕೀರ್ತಿ ಡಾ. ಡಿ.ಸಿ. ಪಾವಟೆ ಅವರಿಗೆ ಸಲ್ಲುತ್ತದೆ. ನಮ್ಮ ಪರಂಪರೆ, ಸಂಸ್ಕೃತಿ ಕಾಪಾಡಬೇಕಾಗಿದೆ ಎಂದರು.
ಕುಲಸಚಿವರಾದ ಯಶಪಾಲ ಕ್ಷೀರಸಾಗರ, ಪ್ರೊ. ಸಿ.ಕೃಷ್ಣಮೂರ್ತಿ, ಡಾ.ಮಲ್ಲಿಕಾರ್ಜುನ ಪಾಟೀಲ, ಡಾ. ಚಂದ್ರಶೇಖರ ರೊಟ್ಟಿಗವಾಡ, ಡಾ. ಸಿ.ಎಂ. ಕುಂದಗೋಳ, ಡಾ.ಬಿ.ಎಚ್ ನಾಗೂರ, ಪ್ರೊ. ವೀರಣ್ಣ ರಾಜೂರ, ಡಾ. ಜಿ.ಸಿ. ತಲ್ಲೂರ, ಡಾ. ಎಸ್.ವಿ. ಅಯ್ಯನಗೌಡರ, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net