

ಬಸವಕಲ್ಯಾಣ: ಮನಸ್ಸಿನ ನಿಯಂತ್ರಣಕ್ಕೆ ಶಿವಾನುಭವ ಚಿಂತನ ಅವಶ್ಯ. ಆರೋಗ್ಯಪೂರ್ಣ ಉತ್ತಮ ಜೀವನಕ್ಕೆ ಪ್ರತಿಯೊಬ್ಬರು ಸತ್ಸಂಗ, ಧ್ಯಾನ, ಯೋಗ ಅಳವಡಿಸಿಕೊಳ್ಳುವುದು ಅವಶ್ಯ ಎಂದು ಗವಿಮಠದ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಹೇಳಿದರು.
ಗವಿಮಠದಲ್ಲಿ ಆಯೋಜಿಸಿದ್ದ ಮಾಸಿಕ ಶಿವಾನುಭವ ಚಿಂತನ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಶ್ರೀಗುರು ಮಾರ್ಗದರ್ಶನದಿಂದ ಜೀವನದಲ್ಲಿ ಶಾಂತಿ, ನೆಮ್ಮದಿ ಮತ್ತು ಸಾರ್ಥಕತೆ ಕಾಣಲು ಸಾಧ್ಯ ಎಂದರು.
ಸನ್ಮಾನ ಸ್ವೀಕರಿಸಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಜಗನ್ನಾಥ ಪತಂಗೆ ಮಾತನಾಡಿ, ಆದರ್ಶ ಬದುಕಿಗೆ ಗುರು ಮಾರ್ಗದರ್ಶನ ಅವಶ್ಯ. ಅವಗುಣಗಳು ಕಳೆದು ಶಿವಗುಣಗಳು ಬರಬೇಕಾದರೆ ಗುರುವಿನ ಪಾತ್ರ ದೊಡ್ಡದು ಎಂದರು.
ಸಂಘದ ಉಪಾಧ್ಯಕ್ಷೆ ಅರುಣಾ ಸ್ವಾಮಿ, ಧನರಾಜ್ ರಾಜೋಳೆ ಅವರನ್ನು ಶ್ರೀಗಳು ಸನ್ಮಾನಿಸಿ ಆಶೀರ್ವದಿಸಿದರು. ಶ್ರೀಮದ್ವೀರಶೈವ ಸದ್ಬೋದನಾ ಸಂಸ್ಥೆ ತಾಲೂಕು ಅಧ್ಯಕ್ಷ ಬಸವಂತಪ್ಪ ಲವಾರೆ ಪ್ರಾಸ್ತಾವಿಕ ಮಾತನಾಡಿದರು. ವೀರಣ್ಣ ಶೀಲವಂತ, ಚಂದ್ರಕಾಂತ ಜೋಕಾರೆ, ಎ.ಜಿ ಪಾಟೀಲ್, ವಿಜಯಕುಮಾರ ಚಿದ್ರಿ, ರೇವಣಸಿದ್ದಯ್ಯ ಮಠಪತಿ, ಬಾಬುರಾವ ಚಳಕಾಪುರೆ, ಚಂದ್ರಕಾಂತ ಸ್ವಾಮಿ, ಶಾಂತವೀರ ಸ್ವಾಮಿ, ಪಪ್ಪು ಜಮಾದಾರ ಇತರರಿದ್ದರು.