

ಔರಾದ್: ಅಂಬಿಗರ ಚೌಡಯ್ಯನವರ ವಚನಗಳು ಜೀವನಕ್ಕೆ ದಾರಿದೀಪಗಳಾಗಿವೆ ಎಂದು ಸಿಡಿಪಿಒ ಶಂಭುಲಿಂಗ ಹಿರೇಮಠ ಹೇಳಿದರು.
ತಾಲೂಕಿನ ಸಂತಪುರ ಸಿಡಿಪಿಒ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಮಾತನಾಡಿ, ಜಗತ್ತಿಗೆ ಮೊದಲು ಪ್ರಜಾಪ್ರಭುತ್ವದ ಕಲ್ಪನೆ ಕೊಟ್ಟಿದ್ದು 12ನೇ ಶತಮಾನದಲ್ಲಿ ಶರಣರು. ಅನುಭವ ಮಂಟಪ ಮೂಲಕ ಸಮಾಜದಲ್ಲಿನ ಮೌಢ್ಯತೆ ತಿದ್ದಲು ಬಸವಾದಿ ಶರಣರು ಶ್ರಮಿಸಿದ್ದರು. ಕೆಳ ವರ್ಗದ ಮಾದಾರ ಚನ್ನಯ್ಯ, ಅಂಬಿಗರ ಚೌಡಯ್ಯ ಸೇರಿದಂತೆ ಅನೇಕರು ವಚನಗಳ ಮೂಲಕ ಸಮಾನತೆ ಪರಿಕಲ್ಪನೆ ನೀಡಿದ್ದರು ಎಂದರು.
ಪೋಷಣ್ ಅಭಿಯಾನ ಯೋಜನೆ ಅಧಿಕಾರಿ ಪ್ರೀತಿ ನಾಸೆ ಮಾತನಾಡಿ, ವಚನಗಳ ಮೂಲಕ ಚೌಡಯ್ಯ ಅವರು ಸಮಾಜವನ್ನು ಜಾಗೃತಗೊಳಿಸಿದರು. ದೇವಾಲಯಗಳಲ್ಲಿ ದೇವರನ್ನು ಹುಡುಕುವದರಲ್ಲಿ ಅರ್ಥವಿಲ್ಲ. ತೀರ್ಥಯಾತ್ರೆ ಮೂಲಕ ದೇವರನ್ನು ಕಾಣಲು ಸಾಧ್ಯವಿಲ್ಲ, ತನ್ನನ್ನು ತಾನು ತಿಳಿದುಕೊಂಡಾಗ ಮಾತ್ರ ಪರಮಾತ್ಮನನ್ನು ಕಾಣಲು ಸಾಧ್ಯ. ಚೌಡಯ್ಯರ ವಚನಗಳಲ್ಲಿನ ತತ್ವ, ಸಂದೇಶಗಳು ಮನನ ಮಾಡಿಕೊಂಡಾಗ ಮಾತ್ರ ಇಂಥ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ ಎಂದು ಹೇಳಿದರು.
ಮುಖಂಡ ಶರಣಪ್ಪ ಜೊನ್ನೆಕೇರಿ, ಊರ್ಮಿಳಾ, ಡೇವಿಡ್, ಸಚ್ಚಿದಾನಂದ, ಬಾಬು, ವಿಜಯಕುಮಾರ, ಸತ್ಯವತಿ, ಗುರುಶಾಂತಯ್ಯ ಇತರರಿದ್ದರು.