ಜೀವನಕ್ಕೆ ಭದ್ರತೆ ಒದಗಿಸಲಿರುವ ಕೌಶಲ ತರಬೇತಿ

Published on

ಗುಂಡ್ಲುಪೇಟೆ: ವಿದ್ಯಾರ್ಥಿಗಳು ಪದವಿ ಪಡೆಯುವ ಬದಲು ಐಟಿಐನಂತಹ ಕೌಶಲ ತರಬೇತಿ ಪಡೆದರೆ ಜೀವನದ ಭದ್ರತೆ ಪಡೆಯಬಹುದು ಎಂದು ಶಾಸಕ ಎಚ್.ಎಂ.ಗಣೇಶ ಪ್ರಸಾದ್ ಹೇಳಿದರು.

ನಬಾರ್ಡೇತರ 386 ಯೋಜನೆಯಡಿ 1.56 ಕೋಟಿ ವೆಚ್ಚದಲ್ಲಿ ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಕಾರ್ಯಾಗಾರ, ಕೋಪಾ ಲ್ಯಾಬ್ ಹಾಗೂ 4 ಕೊಠಡಿಗಳನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯಲ್ಲಿ ಒಂದು ಹಾಗೂ ಎರಡು ವರ್ಷದ ಒಟ್ಟು 9 ವೃತ್ತಿಗಳಲ್ಲಿ 300 ಕ್ಕು ಹೆಚ್ಚು ತರಬೇತಿದಾರರು ತರಬೇತಿ ಪಡೆಯುತ್ತಿದ್ದಾರೆ. ಸ್ಥಳೀಯ, ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗ ಪಡೆದಿರುವುದು ಹೆಮ್ಮೆಯ ವಿಷಯ. ಕೊರತೆ ಇದ್ದ ಫಿಟ್ಟರ್ ವೃತ್ತಿಗೆ ಪ್ರಸ್ತುತ 2025 ನೇ ಸಾಲಿನಿಂದ ಪ್ರವೇಶ ನೀಡಲಾಗುತ್ತಿದ್ದು, ಗುಂಡ್ಲುಪೇಟೆ ಪಟ್ಟಣ ಮತ್ತು ಸುತ್ತಮುತ್ತಲಿನ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ನೀಡಲು ಸುಸಜ್ಜಿತವಾದ ಕಾರ್ಯಾಗಾರದೊಂದಿಗೆ ಪ್ರಾರಂಭಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸ್ಥೆಯಲ್ಲಿ ಲಭ್ಯವಿರುವ ಎಲ್ಲ ದೀರ್ಘಕಾಲಿಕ ಮತ್ತು ಅಲ್ಪಕಾಲಿಕ ವೃತ್ತಿಗಳನ್ನು ಬಳಸಿಕೊಂಡು ನಿರುದ್ಯೋಗ ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ತರಬೇತಿ ಪಡೆಯಬೇಕೆಂದು ತಿಳಿಸಿದರು. ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಪುರಸಭೆ ಅಧ್ಯಕ್ಷ ಜಿ.ಎಸ್.ಮಧುಸೂದನ್, ಉಪಾಧ್ಯಕ್ಷ, ಅಣ್ಣಯ್ಯಸ್ವಾಮಿ, ಪ್ರಾಂಶುಪಾಲ ಶ್ರೀಕಂಠ ಆರಾಧ್ಯ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಹದಿನಾರು ಪ್ರಸಾದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net