

ವಿಜಯವಾಣಿ ಸುದ್ದಿಜಾಲ ಧಾರವಾಡ
ಮನುಷ್ಯನ ಜೀವನದಲ್ಲಿ ತಂದೆ-ತಾಯಿ ಹಾಗೂ ಗುರು ಮಹತ್ವದ ಸ್ಥಾನ ಪಡೆಯುತ್ತಾರೆ. ಜೀವನದ ಏಳ್ಗೆಗೆಗೆ ಶ್ರಮಿಸಿದ ಗುರುಗಳನ್ನು ಸ್ಮರಿಸುವ ಸುದಿನವೇ ಗುರು ಪೂರ್ಣಿಮೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅಭಿಪ್ರಾಯಪಟ್ಟರು.
ಗುರು ಪೂರ್ಣಿಮೆ ನಿಮಿತ್ತ ನಗರದ ಸಾಧನಕೇರಿ ಬೇಂದ್ರೆ ಭವನದಲ್ಲಿ ಪದ್ಮಶ್ರೀ ಸಂಗೀತ ಪ್ರತಿಷ್ಠಾನ ವತಿಯಿಂದ ಸೋಮವಾರ ಏರ್ಪಡಿಸಿದ್ದ ಗುರುವಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ಕವಿ ನರಸಿಂಹ ಪರಾಂಜಪೆ ಮಾತನಾಡಿ, ನಮಗೆ ಕಲಿಸಿದ, ಜೀವನದ ದಾರಿ ತೋರಿದ ಗುರುವನ್ನು ನಾವು ಸ್ಮರಿಸಲೇಬೇಕು. ಅದೇ ರೀತಿ ನನಗೆ ವರಕವಿ ಬೇಂದ್ರೆ ಕಾವ್ಯಗುರುವಾಗಿ ದಾರಿ ತೋರಿದ್ದಾರೆ. ವಿದ್ಯಾರ್ಥಿಗಳು ಗುರುವಿನ ಮಾರ್ಗದರ್ಶನ ಪಡೆದು, ಅದೇ ದಾರಿಯಲ್ಲಿ ಮುನ್ನಡೆಯಬೇಕು ಎಂದರು.
ಪದ್ಮಶ್ರೀ ಸಂಗೀತ ಪ್ರತಿಷ್ಠಾನದ ಅಧ್ಯಕ್ಷ ಡಾ. ವೆಂಕಟೇಶ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಪಂ. ಪ್ರಸನ್ನ ಗುಡಿ, ಲಯಾ ಪ್ರತಿಷ್ಠಾನ ಸಂಸ್ಥಾಪಕ ಆತ್ಮಾನಂದ ಕಬ್ಬೂರ, ವಿಶ್ರಾಂತ ಕುಲಪತಿ ಜೆ.ಎಚ್. ಕುಲಕರ್ಣಿ, ರಮಾ ಗುಡಿ, ಪ್ರಕಾಶ ಬಾಳಿಕಾಯಿ, ವಾಮನರಾವ್ ಮುದಕವಿ, ಗಾಯತ್ರಿ ಟೊಣಪಿ, ವಾಣಿಶ್ರೀ ಕುಲಕರ್ಣಿ, ಸನ್ನಿಧಿ ಮಹಿಳಾ ಮಂಡಳದ ಸದಸ್ಯರು, ಇತರರು ಇದ್ದರು.
ಮಂಗಳೂರಿನ ದಯಾಕರ ಭಟ್ಟ, ಭಾರ್ಗವಿ ಕುಲಕರ್ಣಿ, ಜಯಶ್ರೀ, ಸಂಗೀತಾ ಶಿಂಧೆ, ರಾಜಶ್ರೀ ಹಿರೇಮಠ ಸಂಗೀತ ಪ್ರಸ್ತುತ ಪಡಿಸಿದರು. ತಬಲಾದಲ್ಲಿ ಗುರುರಾಜ ದೇಶಪಾಂಡೆ, ಹಾರ್ಮೊನಿಯಂದಲ್ಲಿ ಪ್ರಕಾಶ ಸಾಥ್ ನೀಡಿದರು.
ಭಾರ್ಗವಿ ಕುಲಕರ್ಣಿ ಸ್ವಾಗತಿಸಿದರು. ಜಯತೀರ್ಥ ವಾಸುದೇವ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಶ್ರೀ ಮತ್ತು ಜಯತೀರ್ಥ ಬೆಳಗಾವಿ ನಿರೂಪಿಸಿದರು. ನಂದಾ ಗುಳೇದಗುಡ್ಡ ವಂದಿಸಿದರು.