ಜೀವನ ಸಕಾರಾತ್ಮಕ ಚಿಂತನೆಗಳಿಂದ ಕೂಡಿರಲಿ

21 vpt. 2.2
Published on

ವಿರಾಜಪೇಟೆ: ಜೀವನ ಸದಾ ಸಕಾರಾತ್ಮಕ ಚಿಂತನೆಗಳಿಂದ ಕೂಡಿರಬೇಕು, ಡೆಡಿಕೇಷನ್, ಡಿಟರ್ಮಿನೇಷನ್, ಡಿಸಿಪ್ಲೀನ್, ಡಿವೋಷನ್ ಈ ನಾಲ್ಕು ‘ಡಿ’ಗಳು ಅತಿ ಮುಖ್ಯ ಎಂದು ಸೋಮವಾರಪೇಟೆ ತಾಲೂಕು ಕೊಡವ ಹಾಕಿ ಅಕಾಡೆಮಿಯ ಕಾರ್ಯನಿರತ ಉಪಾಧ್ಯಕ್ಷ ಕುಕ್ಕೆರ ಜಯ ಚಿನ್ನಪ್ಪ ತಿಳಿಸಿದರು.

ವಿರಾಜಪೇಟೆ ಕಾವೇರಿ ಕಾಲೇಜು, ಕೊಡವ ಹಾಕಿ ಅಕಾಡೆಮಿ ಹಾಗೂ ಹಾಕಿ ಕರ್ನಾಟಕದ ಸಂಯುಕ್ತ ಆಶ್ರಯದಲ್ಲಿ ಕಾವೇರಿ ಕಾಲೇಜಿನ ಕೌಸ್ತುಭ ಸಭಾಭವನದಲ್ಲಿ ಗುರುವಾರ ನಡೆದ ಹಾಕಿ ತೀರ್ಪುಗಾರರ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ನಮ್ಮ ಕಾಲದ ಹಾಕಿ ಆಟಕ್ಕೂ, ಈ ಕಾಲದ ಹಾಕಿಯ ಆಟಕ್ಕೂ ಬಹಳ ಬದಲಾವಣೆಯಾಗಿದೆ. ಈ ರೀತಿಯ ಕಾರ್ಯಾಗಾರಗಳು ನಡೆದಂತಹ ಸಂದರ್ಭದಲ್ಲಿ ನೂತನವಾಗಿ ಅಳವಡಿಸಿರುವ ನಿಯಮಗಳು ಎಲ್ಲ ಕ್ರೀಡಾಪಟುಗಳಿಗೂ, ಇತರರಿಗೂ ತಿಳಿಯಲು ಸಾಧ್ಯ. ಈ ಕಾರ್ಯಾಗಾರದಲ್ಲಿದ್ದ ಸಂಪನ್ಮೂಲ ವ್ಯಕ್ತಿಗಳು ಹೆಚ್ಚಿನ ವಿಚಾರಗಳನ್ನು ತಮಗೆ ಎರಡು ದಿನಗಳ ಕಾಲ ತಿಳಿಸಿಕೊಟ್ಟಿದ್ದಾರೆ ಎಂದರು.

ಪ್ರಾಂಶುಪಾಲ ಬೆನಡಿಕ್ಟ್ ಆರ್.ಸಲ್ಡಾನ ಮಾತನಾಡಿ, ನಮಗೆ ತಪ್ಪನ್ನು ಮಾಡಲು ಯಾವುದೇ ರೀತಿಯ ಮಾರ್ಗದರ್ಶನ, ಪ್ರೇರಣೆಯ ಅಗತ್ಯವಿರುವುದಿಲ್ಲ. ಆದರೆ ಒಳ್ಳೆಯ ಕೆಲಸಗಳನ್ನು ಮಾಡಲು ಉತ್ತಮವಾದ ಮಾರ್ಗದರ್ಶನ ಅಗತ್ಯ. ಅದೇ ರೀತಿಯಾಗಿ ಒಂದು ಕ್ರೀಡಾಕೂಟ ಯಶಸ್ಸು ಕಾಣಬೇಕಾದರೆ ಉತ್ತಮ ಮಾರ್ಗದರ್ಶನ ಪಡೆದ ತೀರ್ಪುಗಾರರು ಅತಿ ಮುಖ್ಯ. ಈ ನಿಟ್ಟಿನಲ್ಲಿ ನಮ್ಮ ಕಾಲೇಜಿನಲ್ಲಿ ಎರಡು ದಿನದವರೆಗೆ ನಡೆದ ಹಾಕಿ ತೀರ್ಪುಗಾರರ ಕಾರ್ಯಾಗಾರ ಯಶಸ್ವಿಯಾಗಿ ನಡೆದಿದ್ದು ಉತ್ತಮ ಸಂಪನ್ಮೂಲ ವ್ಯಕ್ತಿಗಳಿಂದ ಯುವಜನರಿಗೆ ಹಾಗೂ ಶಿಬಿರಾರ್ಥಿಗಳಿಗೆ ಉತ್ತಮ ರೀತಿಯ ಮಾಹಿತಿ ನೀಡಲಾಗಿದೆ ಎಂದರು.

ಹಾಕಿ ಇಂಡಿಯಾದ ಅಂತಾರಾಷ್ಟ್ರೀಯ ಹಾಕಿ ಕ್ರೀಡಾಕೂಟದ ತಾಂತ್ರಿಕ ತೀರ್ಪುಗಾರರಾದ ಪುಲ್ಲಂಗಡ ರೋಹಿಣಿ ಬೋಪಣ್ಣ ಮಾತನಾಡಿ, ಯಾವುದೇ ಕೆಲಸ ಮಾಡುವುದಾದರೆ ಆಸಕ್ತಿಯಿಂದ ಮಾಡಬೇಕು. ಆದರಲ್ಲೂ ಕ್ರೀಡೆಯ ತೀರ್ಪುಗಾರಿಕೆಯಲ್ಲಿ ತೀರ್ಪುಗಾರರಾಗಿ ತಂಡ ಅಥವಾ ತಾಂತ್ರಿಕ ತೀರ್ಪುಗಾರ ಎಂಬುದನ್ನು ಸ್ವಹಿತಾಸಕ್ತಿಯಿಂದ ತೀರ್ಮಾನಿಸಿ ಮುಂದುವರಿದರೆ ಮಾತ್ರ ಉತ್ತಮ ತೀರ್ಪುಗಾರರಾಗಲು ಸಾಧ್ಯ. ಆಸಕ್ತಿಯಿಂದ ತೀರ್ಪುಗಾರಿಕೆ ನಡೆಸುತ್ತಾ ಹೋದರೆ ವಿವಿಧ ಹಂತಗಳಲ್ಲಿ ಬೆಳವಣಿಗೆ ಬೇಕಾದ ಎಲ್ಲ ರೀತಿಯ ಸಹಕಾರವನ್ನು ಶಿಬಿರಾರ್ಥಿಗಳಿಗೆ ನೀಡಲಾಗುವುದು ಎಂದರು.

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ನಂತರ ಎಲ್ಲ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಈ ಕಾರ್ಯಾಗಾರದಲ್ಲಿ ಒಟ್ಟು 58 ಶಿಬಿರಾರ್ಥಿಗಳು ಭಾಗವಹಿಸಿದ್ದರು.

ಸಂಪನ್ಮೂಲ ವ್ಯಕ್ತಿ ರಘುಪ್ರಸಾದ್, ವಿರಾಜಪೇಟೆ ಕೊಡವ ಹಾಕಿ ತಾಲೂಕು ಉಪಾಧ್ಯಕ್ಷರಾದ ಮಾದಂಡ ಪೂವಯ್ಯ, ಮಡಿಕೇರಿ ಕೊಡವ ಹಾಕಿ ತಾಲೂಕು ಉಪಾಧ್ಯಕ್ಷರಾದ ಬಡಕಡ ಡೀನಾ ಪೂವಯ್ಯ, ಕಂಬೀರಂಡ ರಾಖಿ ಪೂವಣ್ಣ, ನೆರಪಂಡ ಹರ್ಷ ಮಂದಣ್ಣ, ಕುಲ್ಲಿಟೀರ ಅರುಣ್ ಬೆಬ, ಅಪ್ಪಚಟೋಲಂಡ ಅಯ್ಯಪ್ಪ, ತಮ್ಮಯ್ಯ ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net