

ಬಸವಕಲ್ಯಾಣ: ಮಾಸಿಕ ಮತ್ತು ದೈಹಿಕ ಸದೃಢತೆಯ ಸಹಕಾರಿಯಾಗಿರುವ ಕ್ರೀಡೆ ಜೀವನದಲ್ಲಿ ವಿಕಾಸಕ್ಕೆ ಅವಶ್ಯಕ. ಅಭ್ಯಾಸದ ಜತೆಗೆ ಕ್ರೀಡೆಗಳಿಗೂ ಮಹತ್ವ ನೀಡಬೇಕು ಎಂದು ಹುಮನಾಬಾದ್ ಡಿವೈಎಸ್‌ಪಿ ಜೆ.ಎಸ್.ನ್ಯಾಮೇಗೌಡ ಹೇಳಿದರು.
ಬಿಇಟಿಯ ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಎರಡು ದಿನಗಳ ವಿಟಿಯು ಕಲಬುರಗಿ ವಲಯದ ಅಂತರ್ ಕಾಲೇಜುಗಳ ವಾಲಿಬಾಲ್ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಒಗ್ಗಟ್ಟಿನ ಪ್ರಜ್ಞೆ, ನಾಯಕತ್ವ ಕೌಶಲ, ದೈಹಿಕ ಶಕ್ತಿ, ಯೋಜನೆ ಮತ್ತು ಕಾರ್ಯತಂತ್ರ, ದೇಶಭಕ್ತಿ ಮತ್ತು ತಂಡದ ಕೆಲಸಗಳಂತಹ ಗುಣಗಳನ್ನು ಅಭಿವೃದ್ಧಿಪಡಿಸಲು ಕ್ರೀಡೆಗಳು ಸಹಕಾರಿಯಾಗುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಿಇಟಿ ನಿರ್ದೇಶಕ ಹಾಗೂ ಪ್ರಾಚಾರ್ಯ ಡಾ.ಅಶೋಕಕುಮಾರ ವಣಗೇರಿ ಮಾತನಾಡಿ, ಒಬ್ಬ ವ್ಯಕ್ತಿಯನ್ನು ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿಡುವಲ್ಲಿ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ. ಕ್ರೀಡೆಗಳು ನಮ್ಮನ್ನು ದೈಹಿಕವಾಗಿ ಸದೃಢರನ್ನಾಗಿ ಮಾಡುವುದು ಮಾತ್ರವಲ್ಲದೇ ಅದು ಕ್ರಿಯಾಶೀಲರನ್ನಾಗಿಸುತ್ತವೆ. ಬಿಇಟಿ ಸಂಸ್ಥೆಯಿಂದ ಶಿಕ್ಷಣ ಜತೆಗೆ ಕ್ರೀಡೆಗೆ ಬೇಕಾಗುವ ಹೆಚ್ಚಿನ ರೀತಿಯ ಸವಲತ್ತು ಕಲ್ಪಿಸಲಾಗುತ್ತಿದೆ ಎಂದರು.
ಉಪಪ್ರಾಚಾರ್ಯ ಡಾ.ಅರುಣಕುಮಾರ ಯಲಾಲ್ ಸ್ವಾಗತಿಸಿದರು. ರಿಜಿಸ್ಟರ್ ಪ್ರೇಮಸಾಗರ ಪಾಟೀಲ್ ವಂದಿಸಿದರು. ಡಾ ಲೀಲಾ ನಿರೂಪಣೆ ಮಾಡಿದರು. ದೈಹಿಕ ನಿರ್ದೇಶಕ ದತ್ತಣ್ಣ ಮಂಟಗೆ, ಪ್ರಾಚಾರ್ಯರಾದ ಡಾ.ನಾಗಯ್ಯ ಸ್ವಾಮಿ, ವಿಶ್ವನಾಥಯ್ಯ ಸ್ವಾಮಿ, ನೀಲಕಂಠ ಕೋಡ್ಲೆ, ಶಿವಕುಮಾರ ಸ್ವಾಮಿ, ಶಂಕರ ಆಗರಗಿ, ಗೋವಿಂದ ಕನಕಾ ಹಾಗೂ ಕಾಲೇಜಿನ ಎಲ್ಲ ವಿಭಾಗದ ಮುಖ್ಯಸ್ಥರು, ಶಿಕ್ಷಕ-ಶಿಕ್ಷಕೇತರರು ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಕ್ರೀಡಾಕೂಟದಲ್ಲಿ ಸುಮಾರು ೧೫ ವಿಟಿಯು ಕಲಬುರಗಿ ವಲಯ ಇಂಜಿನೀಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.