

ಕಡೂರು: ಸಾಮಾಜಿಕ ಹೊಣೆಗಾರಿಕೆಯನ್ನರಿಯದ ಬರಹ ಬರಹವೇ ಅಲ್ಲ. ಜೀವನ ಬದ್ಧತೆಯೂ ಸಾಹಿತ್ಯದ ಸ್ವರೂಪವಾಗಬೇಕೆನ್ನುವುದು ವಚನ ಸಾಹಿತ್ಯದ ವಿಶೇಷ ಎಂದು ಜಿಲ್ಲಾ ದ್ವಿತೀಯ ವಚನ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ಶೃಂಗೇರಿ ಶಿವಣ್ಣ ಅಭಿಪ್ರಾಯಪಟ್ಟರು. ಪಟ್ಟಣದ ಕೆ.ಹೊಸಳ್ಳಿಯ ಗಂಗಾಂಬಿಕ ಸಮುದಾಯ ಭವನದಲ್ಲಿ ಶನಿವಾರ ಜಿಲ್ಲಾ ಕಸಾಪ ಆಯೋಜಿಸಿದ್ದ ವಚನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಮಾಜಿಕ ಸಮಾನತೆಯನ್ನು ಸಾಹಿತ್ಯದ ಮೂಲಕ ಕಾಣುವ ಯುಗವನ್ನು ನೋಡಲು ಹಂಬಲಿಸಬೇಕಿದೆ. ಜೀವನದ ಎಲ್ಲ ಜಂಜಾಟಗಳಿಗೂ ಕನ್ನಡ ಸಾಹಿತ್ಯ, ವಚನ ಸಾಹಿತ್ಯದಲ್ಲಿ ಪರಿಹಾರ ಇದೆ. 1880ರ ಕಾಲಘಟ್ಟದಲ್ಲಿ ಫ.ಗು.ಹಳಕಟ್ಟಿ ಅವರು ವಚನ ಸಾಹಿತ್ಯ ಸಂಶೋಧನೆ ನಡೆಸಿ ಸಂರಕ್ಷಣೆ ಮಾಡದಿದ್ದರೆ ಸಮೃದ್ಧ ಸಾಹಿತ್ಯ ಲಭ್ಯವಾಗುತ್ತಿರಲಿಲ್ಲ ಎಂದರು. ಭಾಷಾ ಪಾಂಡಿತ್ಯದ ಮೆರುಗಿಲ್ಲದಿದ್ದರೂ ಭಾವಸ್ಪಂದನೆಯೇ ಬರವಣಿಗೆಗೆ ಮೂಲ ಸೆಲೆಯಾಗಲಿದೆ. ವಿಶ್ವ ಸಾಹಿತ್ಯಕ್ಕೆ ವಚನಗಳು ಕನ್ನಡದ ವಿಶಿಷ್ಟ ಕೊಡುಗೆಯೆನಿಸಿವೆ. ಶಿವಶರಣರ ಬೋಧನೆಗಳು ಗದ್ಯರೂಪದಲ್ಲಿ ಲಭ್ಯವಾಗುತ್ತವೆ. ಸಾಹಿತ್ಯದ ಪ್ರಕಾರದಲ್ಲಿ ಸಾಮಾಜಿಕ, ಧಾರ್ವಿುಕ ಸುಧಾರಣೆಯನ್ನು ಜನಸಾಮಾನ್ಯರಲ್ಲಿ ತರಲು ವಚನಕಾರರು ಶ್ರಮಿಸಿದ್ದಾರೆ. ಕ್ರಾಂತಿಯ ನೇತಾರರಾಗಿ ಬಸವಣ್ಣನವರು ಅನುಭವ ಮಂಟಪದ ಮೂಲಕ ಬಹಿರಂಗ ಶುದ್ಧಿಗಿಂತ ಅಂತರಂಗ ಶುದ್ಧಿಯೇ ಮುಖ್ಯವೆಂಬುದನ್ನು ಜಗತ್ತಿಗೆ ಸಾರಿದ್ದಾರೆ. ವಚನಕಾರರ ಸಂದೇಶಗಳು ಸಾರ್ವಕಾಲಿಕ ಸತ್ಯವಾಗಿದ್ದು ಮುಂದಿನ ಪೀಳಿಗೆಗೆ ಮುಟ್ಟಿಸಬೇಕಿದೆ ಎಂದು ತಿಳಿಸಿದರು. ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಕನ್ನಡ ಭಾಷೆ ರಕ್ಷಣೆಗೆ ನಾವೆಲ್ಲರೂ ಬದ್ಧರಾಗಿರಬೇಕು. ಕಸಾಪ ಮೂಲಕ ವಿವಿಧ ಪ್ರಕಾರದ ಸಮ್ಮೇಳನಗಳನ್ನು ಆಯೋಜಿಸುತ್ತಿರುವುದು ಹೆಮ್ಮೆಯ ಸಂಗತಿ. ಭಾಷೆ, ಸಂಸ್ಕೃತಿಯ ಬೆಳವಣಿಗೆಗೆ ಸಾಕ್ಷಿಯಾದ ವಚನಕಾರರ ಸ್ಮರಿಸುವ ಕಾಯಕದಲ್ಲಿ ಮುಂದಿನ ಪೀಳಿಗೆಗೂ ಕೊಂಡೊಯ್ಯುವ ಸಂದೇಶಗಳು ಸಮ್ಮೇಳನದಿಂದ ಆಗಲಿ ಎಂದು ಆಶಿಸಿದರು. ವಚನ ಸಾಹಿತ್ಯವು ಕನ್ನಡ ಸಾಹಿತ್ಯಕ್ಕೆ ದೊಡ್ಡ ಶಕ್ತಿಯಾಗಿದೆ. ವಚನಸಾಹಿತ್ಯವು ಸಾತ್ವಿಕ ಭಾಷೆ ಮೂಲಕ ಸರಳವಾಗಿ ಮನಮುಟ್ಟವ ಸಂದೇಶವಾಗಿದೆ. ಮೌಢ್ಯದ ವಿರುದ್ಧ ಧ್ವನಿ ಎತ್ತುವಲ್ಲಿ ವಚನಕಾರರ ಪಾತ್ರ ಪ್ರಮುಖವಾಗಿದ್ದು, ಈ ನಿಟ್ಟಿನಲ್ಲಿ ವಚನಗಳ ಮೂಲಕ ಶರಣರ ಸಂದೇಶಗಳು ಜಗತ್ತಿಗೆ ಪ್ರಚಲಿತಗೊಂಡಿವೆ ಎಂದು ಚಿತ್ರದುರ್ಗದ ಬಂಜಾರ ಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಅಭಿಪ್ರಾಯಪಟ್ಟರು.