ಜೀವ ಜಲ ಸಂರಕ್ಷಣೆ ಸರ್ವರ ಹೊಣೆ

HYR dharmasthala 13
Published on

ಹಿರಿಯೂರು: ನಮ್ಮ ಪೂರ್ವಜರು ಕಟ್ಟಿಸಿದ ಕೆರೆ, ಕಟ್ಟೆ, ಹಳ್ಳ, ಕೊಳ್ಳ ಇತರ ಜಲ ಮೂಲ ಸಂರಕ್ಷಣೆಯ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದು ಪ್ರಗತಿ ಪರ ರೈತ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ದೊಡ್ಡಯ್ಯ ಹೇಳಿದರು.

ತಾಲೂಕಿನ ಮದ್ದಿಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೆರೆ ಹೂಳೆತ್ತುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಅರಣ್ಯ, ಗಿಡ, ಮರ, ಕೆರೆಗಳ ಸಂರಕ್ಷಣೆ ಮಾಡುವುದರಿಂದ ಸಕಾಲಕ್ಕೆ ಮಳೆ-ಬೆಳೆಯಾಗಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಬಹುದು, ಧರ್ಮಪುರ ಹೋಬಳಿಯಲ್ಲಿ 800 ಅಡಿ ಕೊಳವೆಬಾವಿ ಕೊರೆಸಿದರು ನೀರು ಸಿಗುತ್ತಿಲ್ಲ, ನೂರು ವರ್ಷದಲ್ಲಿ 80 ವರ್ಷ ಬರಪರಿಸ್ಥಿತಿ ಎದುರಿಸಬೇಕಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಭವಿಷ್ಯದಲ್ಲಿ ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಎಂದು ಎಚ್ಚರಿಸಿದರು.

ಗ್ರಾಮೀಣ ಭಾಗದ ಜಲಪಾತ್ರೆಗಳ ಸಂರಕ್ಷಣೆಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮೂಲಕ ಕೆರೆ ಹೂಳೆತ್ತುವ ಕಾರ್ಯ ಮಾಡುತ್ತಿರುವುದು ಜೀವ ಜಲ ಸಂರಕ್ಷಣೆಗೆ ವರದಾನವಾಗಲಿದೆ ಎಂದರು.

ಯೋಜನೆ ಜಿಲ್ಲಾ ನಿರ್ದೇಶಕ ವಿನಯಕುಮಾರ್, ಸುವರ್ಣಾ, ಯೋಜನಾಧಿಕಾರಿ ಗೀತಾ, ಗ್ರಾಪಂ ಅಧ್ಯಕ್ಷೆ ನಾಗಮ್ಮ, ಪಿಡಿಒ ವಿವೇಕ್, ಗ್ರಾಮಸ್ಥರಾದ ಮುದ್ದರಾಮಣ್ಣ, ದಾಸಣ್ಣ, ಗೋವಿಂದರಾಯ, ತಿಪ್ಪೇಸ್ವಾಮಿ, ನಿವೃತ್ತ ಸೈನಿಕ ಶಿವಣ್ಣ, ರಾಮಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net