

ಮಳವಳ್ಳಿ: ಜೀವಸಂಕುಲದ ಯಾವುದೇ ಜೀವ ಅನಾರೋಗ್ಯಕ್ಕೀಡಾದಾಗ, ನಿಸ್ವಾರ್ಥತೆಯಿಂದ ಚಿಕಿತ್ಸೆ ನೀಡಿ ರಕ್ಷಿಸುವ ಪ್ರತಿಯೊಬ್ಬ ವೈದ್ಯರೂ ದೈವಾಂಶಸಂಭೂತರು ಎಂದು ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಆರ್.ಜಿ.ಮಹದೇವಸ್ವಾಮಿ ತಿಳಿಸಿದರು.
ತಾಲೂಕಿನ ನೆಲ್ಲಿಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಗುರುಪೌರ್ಣಿಮೆ ಮತ್ತು ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈದ್ಯೋ ನಾರಾಯಣೋ ಹರಿ ಎಂದು ಅನಾದಿಕಾಲದ ವೇದಾ ಉಪನಿಷತ್‌ಗಳಲ್ಲೇ ಉಲ್ಲೇಖವಾಗಿರುವಂತೆ ಜೀವ ಉಳಿಸುವ ವೈದ್ಯರು ದೇವರಿದ್ದಂತೆ ಎಂದು ಸ್ಮರಿಸಿದರು.
ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿರುವ ಪ್ರತಿಯೊಬ್ಬ ಸಾಧಕನ ಹಿಂದೆ ಒಬ್ಬ ಗುರು ಇದ್ದೇ ಇರುತ್ತಾನೆ. ಆದ್ದರಿಂದ ಯಾವುದೇ ವ್ಯಕ್ತಿ ಸಮಾಜದಲ್ಲಿ ಎಷ್ಟೇ ಉನ್ನತ ಪದವಿಗಳನ್ನು ಪಡೆದರೂ ಗುರುವಿನ ಸ್ಮರಣೆ ಮರೆಯಬಾರದು. ಮನುಕುಲದ ಪ್ರಥಮ ಗುರು ವೇದ ಮಹರ್ಷಿಗಳು ಶುಕ್ಲ ಪಕ್ಷದ ಹುಣ್ಣಿಮೆಯ ದಿನವಾದ ಇಂದು ಜನ್ಮತಳೆದ ನೆನಪಿಗಾಗಿ ಗುರು ಪೌರ್ಣಿಮೆ ಎಂದು ಆಚರಣೆ ಮಾಡಲಾಗುತ್ತಿದೆ. ಅದೇ ರೀತಿಯ ಪಶ್ಚಿಮ ಬಂಗಾಳದ ಡಾ.ಬಿ.ಸಿ.ರಾಯ್ ಅವರು ವೈದ್ಯರಾಗಿ ಹಾಗೂ ಎರಡು ಬಾರಿ ಮುಖ್ಯಮಂತ್ರಿಯಾಗಿ ಸಲ್ಲಿಸಿದ ಸೇವೆಯನ್ನು ಸ್ಮರಿಸಿ ವೈದ್ಯರ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಭುವನೇಶ್ವರಿದೇವಿ ಅವರನ್ನು ಸನ್ಮಾನಿಸಲಾಯಿತು. ಪ್ರಭಾರ ಮುಖ್ಯ ಶಿಕ್ಷಕ ಲಿಂಗಯ್ಯ, ಸಹ ಶಿಕ್ಷರಾದ ಪಂಕಜಾ, ರಜನಿ, ಮಲ್ಲಿಕಾರ್ಜುನ, ಭಾಸ್ಕರ್, ಮಹದೇವಯ್ಯ, ಆಶಾ ಕಾರ್ಯಕರ್ತೆ ಹೇಮಲತಾ ಉಪಸ್ಥಿತರಿದ್ದರು.