

ಬೆಂಗಳೂರು ಗ್ರಾಮಾಂತರ: ಕರೊನಾ ನಿಯಂತ್ರಣಕ್ಕೆ ಲಾಕ್‌ಡೌನ್ ಅನಿವಾರ್ಯವಾಗಿದೆ. ಇದರಿಂದ ಆರ್ಥಿಕ ಸಂಕಷ್ಟ ಎದುರಾಗಿದ್ದು, ಜೀವನ ನಡೆಸುವುದು ದುಸ್ತರವಾಗಿದೆ. ಆದರೆ ಜೀವ ಉಳಿದರೆ ತಾನೇ ಜೀವನ ನಡೆಸಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದು ಪೌರಾಡಳಿತ ಮತ್ತು ಸಕ್ಕರೆ ಖಾತೆ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಅನುಗೊಂಡನಹಳ್ಳಿ ಹಾಗೂ ಜಡಿಗೇನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಶುಕ್ರವಾರ ತರಕಾರಿ ಹಾಗೂ ಆಹಾರ ಕಿಟ್ ವಿತರಿಸಿ ಮಾತನಾಡಿದರು. ರಾಜ್ಯದಲ್ಲಿ ಮಹಾಮಾರಿ ಕರೊನಾ ನಿಯಂತ್ರಣಕ್ಕೆ ಈ ಹಿಂದೆ ಹೇರಿದ್ದ 14 ದಿನದ ಲಾಕ್‌ಡೌನ್ ಆದೇಶವನ್ನು ಮತ್ತೆ ಮುಂದುವರಿಸಲಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ಇದು ಅನಿವಾರ್ಯವೂ ಹೌದು. ತಜ್ಞರ ಸಲಹೆಯಂತೆ ಸರ್ಕಾರ ಈ ಕ್ರಮ ಕೈಗೊಂಡಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಕರೊನಾ ಸೋಂಕು ಎಲ್ಲ ವಯಸ್ಸಿನವರನ್ನು ಬಲಿ ಪಡೆಯುತ್ತಿದೆ. ಸಾರ್ವಜನಿಕರು ಸರ್ಕಾರ ರೂಪಿಸಿರುವ ಕರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸೋಂಕಿನ ಸರಪಳಿಯನ್ನು ಮುರಿಯಬೇಕು ಎಂದು ಹೇಳಿದರು.
ಈಗಾಗಲೇ ಹೊಸಕೋಟೆ ತಾಲೂಕಿನಲ್ಲಿ ಕರೊನಾಗೆ 180 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದು ದುಃಖಕರ ಸಂಗತಿ. ಕರೊನಾ ವಿಷಯದಲ್ಲಿ ನಾವು ಮತ್ತಷ್ಟು ಮುಂಜಾಗ್ರತೆ ವಹಿಸಬೇಕಿದೆ. ಯಾವುದೇ ರೋಗ ಲಕ್ಷಣ ಕಂಡುಬಂದರೆ ಕೂಡಲೇ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.
ಜನರೇ ಸರ್ಕಾರ: ಕರೊನಾ ನಿಯಂತ್ರಣ ಕೇವಲ ಸರ್ಕಾರದ ಕೆಲಸ ಎಂದು ಎಲ್ಲ ಜವಾಬ್ದಾರಿ ಸರ್ಕಾರದ ಮೇಲೆ ಹೊರಸಬಾರದು. ಏಕೆಂದರೇ ನೀವೇ ಸರ್ಕಾರ. ನಿಮ್ಮ ತೆರಿಗೆ ಹಣದಿಂದಲೇ ಸರ್ಕಾರ ನಡೆಯುತ್ತಿದೆ. ನೀವೇ ನೀಡಿದ ಅಧಿಕಾರದಿಂದ ಎಲ್ಲವೂ ನಡೆಯುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ವೈಯಕ್ತಿಕವಾಗಿ ಕರೊನಾ ಹಿಮ್ಮೆಟ್ಟಿಸಲು ಹೋರಾಡಬೇಕು ಎಂದು ಎಂಟಿಬಿ ನಾಗರಾಜ್ ಕರೆ ನೀಡಿದರು.
1400 ಕುಟುಂಬಕ್ಕೆ ಕಿಟ್: ಅನುಗೊಂಡನಹಳ್ಳಿ ಹೋಬಳಿ ಕಲ್ಕುಂಟೆ ಅಗ್ರಹಾರ ಗ್ರಾಪಂ ವ್ಯಾಪ್ತಿಯ ನಾರಾಯಣಕೆರೆ, ಅರೇಹಳ್ಳಿ, ಮುತ್ತಗದಹಳ್ಳಿ, ಬ್ಯಾಲಹಳ್ಳಿ ಗ್ರಾಮಗಳಲ್ಲಿ 800 ಕುಟುಂಬಗಳಿಗೆ ಹಾಗೂ ಜಡಿಗೇನಹಳ್ಳಿ ಹೋಬಳಿ ವಾಗಟ ಗ್ರಾಪಂ ವ್ಯಾಪ್ತಿಯ ಕೋಡಿಹಳ್ಳಿ, ಕಾಚಾರಕನಹಳ್ಳಿ, ಕಣೇಕಲ್, ಹುಣಸೇಹಳ್ಳಿ ಗ್ರಾಮಗಳಲ್ಲಿ 600 ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಲಾಯಿತು.