

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಕರೊನಾ ಸೋಂಕಿನ ನಿಯಂತ್ರಣದ ಹೆಸರಿನಲ್ಲಿ ಖರ್ಚಾದ 5 ಸಾವಿರ ಕೋಟಿ ರೂ.ಪೈಕಿ ಬರೋಬ್ಬರಿ 3 ಸಾವಿರ ಕೋಟಿ ರೂ.ಲೂಟಿಯಾಗಿದೆ ಎಂದು ಆರೋಪಿಸಿರುವ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕರ್ನಾಟಕದ ಇತಿಹಾಸದಲ್ಲಿ ಬಿಜೆಪಿಯದ್ದೇ ಭ್ರಷ್ಟ ಮತ್ತು ಹೇಡಿ ಸರ್ಕಾರ ಎಂದು ವ್ಯಂಗ್ಯವಾಡಿದರು.
ನಗರದ ಶಿಡ್ಲಘಟ್ಟ ವೃತ್ತದಲ್ಲಿ ಜನಧ್ವನಿ ರ‌್ಯಾಲಿಯಲ್ಲಿ ಮಾತನಾಡಿ, ಮುಖ್ಯಮಂತ್ರಿಯಾಗಿದ್ದಾಗ ಕೃಷಿಭಾಗ್ಯ, ಅನ್ನಭಾಗ್ಯ ಸೇರಿ ಹಲವು ಯೋಜನೆಗಳನ್ನು ಘೋಷಿಸಿದ್ದು ಬಿಜೆಪಿ ಸರ್ಕಾರದ್ದು ಜೀರೋ ಕೊಡುಗೆಯೇ ದೊಡ್ಡ ಸಾಧನೆಯಾಗಿದೆ ಎಂದು ವ್ಯಂಗ್ಯವಾಡಿದರು.
ಅನ್ನಭಾಗ್ಯ ಯೋಜನೆಯಡಿ ನೀಡುತ್ತಿದ್ದ 7 ಕೆ.ಜಿ.ಪೈಕಿ 2 ಕೆ.ಜಿ.ಕಡಿತಗೊಳಿಸುವ ಮೂಲಕ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ, ಕರೊನಾ ಸೋಂಕು ವಿವಿಧ ದೇಶಗಳನ್ನು ಬಾಧಿಸುತ್ತಿದೆ. ಆದರೆ ಆ ದೇಶಗಳು ಚೇತರಿಸಿಕೊಂಡು ಪ್ರಗತಿಯತ್ತ ಮುನ್ನಡೆಯುತ್ತಿರುವುದರ ಜತೆಗೆ ಜನರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆಗೆ ತಂದಿದೆ. ಆದರೆ, ಇಲ್ಲಿ ಮಾತ್ರ ಇನ್ನೂ ಕರೊನಾ ಜಪ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಮಾಜಿ ಸಂಸದ ಎಂ.ವೀರಪ್ಪ ಮೊಯ್ಲಿ ಮಾತನಾಡಿ, ಬ್ರಿಟಿಷರ ಮಾದರಿಯಲ್ಲಿ ಒಡೆದು ಆಳುವ ನೀತಿಯನ್ನು ಪ್ರಧಾನಿ ಮೋದಿ ಅನುಸರಿಸುತ್ತಿದ್ದಾರೆ. ಇವರ ಆಡಳಿತದ ಪರಿಣಾಮ ವ್ಯಾಪಾರಸ್ಥರು, ರೈತರು, ಕೂಲಿ ಕಾರ್ಮಿಕರು ಬೀದಿಗೆ ಬಂದಿದ್ದಾರೆ. ದೆಹಲಿಯಲ್ಲಿ ಹಲವು ದಿನಗಳಿಂದ ಅನ್ನದಾತರು ಹೋರಾಟ ನಡೆಸಿದರೂ ಒಂದು ನಿಮಿಷ ಸಹ ಹೋಗಿ ಸಂಕಷ್ಟ ಆಲಿಸಲಿಲ್ಲ ಎಂದು ಕಿಡಿಕಾರಿದರು.
ಇಂಧನ ಬೆಲೆಯೂ ನಿರಂತರವಾಗಿ ಏರಿಕೆ ಕಾಣುತ್ತಿದೆ. ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಸಿಲಿಂಡರ್ ದರ ಹೆಚ್ಚಾದಾಗ 5 ಲಕ್ಷ ಕೋಟಿ ರೂ.ಸಬ್ಸಿಡಿ ಮೀಸಲಿಡಲಾಗಿತ್ತು. ಆದರೆ, ಇದೀಗ ಕೇಂದ್ರ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ 25 ಲಕ್ಷ ಕೋಟಿ ರೂ. ಸಂಗ್ರಹವಾಗಿದ್ದರೂ ದರ ಹೆಚ್ಚಳಕ್ಕೆ ಕಡಿವಾಣ ಹಾಕಿಲ್ಲ ಎಂದರು.
ಜನರಲ್ಲಿ ಅಚ್ಛೆದಿನ್ ಆಸೆ ಹುಟ್ಟಿಸಿ ಅಧಿಕಾರ ಹಿಡಿದ ಬಿಜೆಪಿ ಗಡಿ ಹಾವಳಿ, ಬೆಲೆ ಏರಿಕೆ, ನಿರುದ್ಯೋಗ, ಕೃಷಿ ಮತ್ತು ಉದ್ಯಮ ಕ್ಷೇತ್ರ ದಿವಾಳಿ ನಿಯಂತ್ರಿಸುವಲ್ಲಿ ವಿಫಲವಾಗಿದೆ. ಎಲ್ಲ ರಂಗದಲ್ಲೂ ವಿಫಲವಾಗಿದ್ದು ಜನರು ರೊಚ್ಚಿಗೆದ್ದಿದ್ದಾರೆ. ಈಗಾಗಲೇ ಯಡಿಯೂರಪ್ಪ ಕುರ್ಚಿ ಅಲುಗಾಡಲು ಶುರುವಾಗಿದೆ ಎಂದರು.
ಶಾಸಕರಾದ ಕೃಷ್ಣಭೈರೇಗೌಡ, ವಿ.ಮುನಿಯಪ್ಪ, ಎನ್.ಎಚ್.ಶಿವಶಂಕರರೆಡ್ಡಿ, ಎಸ್.ಎನ್.ಸುಬ್ಬಾರೆಡ್ಡಿ, ಮಾಜಿ ಶಾಸಕ ಎನ್.ಸಂಪಂಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ ರಮೇಶ್, ಮುಖಂಡರಾದ ಜಿ.ಎಚ್.ವಿನಯ್ ಶ್ಯಾಮ್ ಮತ್ತಿತರರು ಇದ್ದರು.
ಅಧಿಕಾರ ಶಾಶ್ವತವಲ್ಲ:ಯಾರಿಗೂ ಅಧಿಕಾರವು ಶಾಶ್ವತವಲ್ಲ. ಕೇಂದ್ರ ಮತ್ತು ಬಿಜೆಪಿ ಸರ್ಕಾರ ನಿರಂತರವಾಗಿ ತಪ್ಪುಗಳ ಮೇಲೆ ತಪ್ಪು ಮಾಡುತ್ತಿವೆ. ಇದರ ನಡುವೆಯೂ ಎಚ್ಚೆತ್ತುಕೊಂಡಿಲ್ಲ. ಇದಕ್ಕೆ ಪ್ರತಿಫಲ ಎದುರಿಸಬೇಕಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದರು.ವಿಪಕ್ಷಗಳನ್ನು ಮಣಿಸಲು ಬೇರೆ ಬೇರೆ ವಿಚಾರಗಳನ್ನು ಮುಂದಿಟ್ಟುಕೊಂಡು ಕಿರುಕುಳ ನೀಡಲಾಗುತ್ತಿದೆ. ಆದರೆ, ಇದಕ್ಕೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಹೆದರುವುದಿಲ್ಲ. ಜಂಟಿಯಾಗಿ ಎಲ್ಲ ಸವಾಲುಗಳನ್ನು ಎದುರಿಸುತ್ತೇವೆ. ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದೇ ತರುತ್ತೇವೆ ಎಂದು ತಿಳಿಸಿದರು.
ಕತ್ತಲಿನಲ್ಲಿ ಭಾಷಣ: ರ‌್ಯಾಲಿ ಬಳಿಕ ಪ್ರಾರಂಭವಾದ ಭಾಷಣದ ಸಂದರ್ಭದಲ್ಲಿ ಕತ್ತಲಿನ ವಾತಾವರಣ ಇತ್ತು. ಇದರ ನಡುವೆಯೂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ವೇಳೆ ಕಾರ್ಯಕರ್ತರು ದೀಪದ ಬೆಳಕಿನ ವ್ಯವಸ್ಥೆಗೆ ಆಗ್ರಹಿಸಿದರು. ಇದಕ್ಕೆ ಏನೇ ಇದ್ದರೂ ಅಡ್ಡಿ ಬಂದರೂ ಮಾತನಾಡುವುದು ನಿಲ್ಲುವುದಿಲ್ಲ ಎಂದೇಳಿ ನಾಯಕರು ತೇಪೆ ಹಚ್ಚಿದರು.