

ಕೋಲಾರ: ಜೀತ ಪದ್ಧತಿ ನಿರ್ಮೂಲನೆಗೆ ಕ್ರಮಕೈಗೊಳ್ಳಿ, ಜೀತಪದ್ಧತಿಗೆ ಒಳಗಾದವರನ್ನು ಬಿಡುಗಡೆಗೊಳಿಸಿ ಎಂದು ಆರ್‌ಡಿಪಿಆರ್ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾ ಮಹದೇವನ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಜೀತ ಪದ್ಧತಿಗೆ ಒಳಗಾದವರನ್ನು ಬಿಡುಗಡೆಗೊಳಿಸಿ ಅವರಿಗೆ ಮಾಸಿಕ 2000 ರೂ. ನೀಡಲು ಅವಕಾಶವಿದೆ. ಹೊರ ರಾಜ್ಯದವರು ನಮ್ಮ ರಾಜ್ಯದಲ್ಲಿ ಜೀತ ಪದ್ಧತಿಗೆ ಗುರಿಯಾಗಿದ್ದರೆ, ಅವರನ್ನು ಬಿಡುಗಡೆಗೊಳಿಸಿ ಅವರ ರಾಜ್ಯಕ್ಕೆ ಕಳುಹಿಸುವವರೆಗೆ ಅಗತ್ಯ ವಸತಿ ಹಾಗೂ ಆಹಾರ ಸೌಲಭ್ಯ ಕಲ್ಪಿಸಬೇಕು. ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪೋಷಣೆ ಮಾಡಬೇಕು ಎಂದರು.
ಇ-ಸ್ವತ್ತಿಗೆ ಸಂಬಂಧಿಸಿದಂತೆ ನವೆಂಬರ್‌ನಲ್ಲಿ 4 ವಿಭಾಗಗಳಲ್ಲಿ ವಿಭಾಗವಾರು ತರಬೇತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಮಟ್ಟದಲ್ಲಿ ತರಬೇತಿ ನೀಡಲಾಗುವುದು. ಹೊಸ ಪಂಚತಂತ್ರ ವ್ಯವಸ್ಥೆಗೆ ತಕ್ಕಂತೆ ತರಬೇತಿ ಆಯೋಜಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿ, ಜಿಲ್ಲೆಯ 6 ಗ್ರಾಮಗಳಿಗೆ 14 ಟ್ರಿಪ್ ನೀರನ್ನು ಖಾಸಗಿ ಟ್ಯಾಂಕರ್ ಮೂಲಕ ಹಾಗೂ 65 ಖಾಸಗಿ ಕೊಳವೆಬಾವಿಗಳ ಮೂಲಕ ನೀರಿನ ಸಮಸ್ಯೆ ಪೂರೈಸಲಾಗುತ್ತಿದೆ. ನಗರ ಪ್ರದೇಶದ 21 ವಾರ್ಡ್‌ಗಳಲ್ಲಿ 21 ಖಾಸಗಿ ಟ್ಯಾಂಕರ್ ಮೂಲಕ 84 ಟ್ರಿಪ್ ನೀರು ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಕಂಡುಬರಬಹುದಾದ 324 ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಲಾಗಿದೆ ಎಂದರು.
ಫೆ.11, 12ರಂದು ನಗರದ ಸಿಬಿಐಟಿ ಕಾಲೇಜಿನಲ್ಲಿ ನಡೆಯುವ ಉದ್ಯೋಗ ಮೇಳಕ್ಕೆ 5500 ಉದ್ಯೋಗ ಆಕಾಂಕ್ಷಿಗಳು ನೋಂದಣಿಯಾಗಿದ್ದಾರೆ. 75 ಕಂಪನಿಗಳು ರಿಜಿಸ್ಟರ್ ಆಗಿದ್ದು, 200ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುತ್ತಿವೆ. ನೋಂದಣಿಯಾದವರಿಗೆ ಫೆ.4ರಿಂದ 8ರವರೆಗೆ ಸರ್ಕಾರಿ ಐಟಿಐ ಕಾಲೇಜುಗಳಲ್ಲಿ ತರಬೇತಿ ನೀಡಲಾಗುವುದು. ಜಿಲ್ಲೆಯಲ್ಲಿ 37 ಐಟಿಐ ಕಾಲೇಜುಗಳು, 12 ಡಿಪ್ಲೊಮಾ ಕಾಲೇಜು, ಬೆಂಗಳೂರು ಉತ್ತರ ವಿವಿ ಹಾಗೂ 2 ಇಂಜಿನಿಯರಿಂಗ್ ಕಾಲೇಜುಗಳು ಸೇರಿ ಅಂತಿಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದ್ದು, ಕಾಲೇಜುಗಳಿಗೆ ಭೇಟಿ ನೀಡಿ ನೋಂದಣಿ ಮಾಡಿಸಲಾಗುತ್ತಿದೆ ಎಂದರು.
ಜಿಪಂ ಸಿಇಒ ಎಚ್.ವಿ ದರ್ಶನ್ ಮಾತನಾಡಿ, ನರೇಗಾ ಯೋಜನೆಯಡಿ ಶೇ.95 ಪ್ರಗತಿ ಸಾಧಿಸಲಾಗಿದೆ. ಜಲಾಮೃತ ಯೋಜನೆಯಡಿ ಜಿಲ್ಲೆಯಾದ್ಯಂತ 22 ಕೆರೆಗಳನ್ನು ಜೀರ್ಣೋದ್ಧಾರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಶಾಲೆಯ ಮಕ್ಕಳ ಸಂಖ್ಯೆಗನುಗುಣವಾಗಿ ಇಲಾಖೆಯಿಂದ ಹಾಗೂ ನರೇಗಾ ಯೋಜನೆಯಡಿ ಶೌಚಗೃಹ ನಿರ್ಮಿಸಲಾಗುತ್ತಿದೆ. ವಿವಿಧ ಯಶಸ್ವಿ ಯೋಜನೆಗಳಡಿ ಜಿಲ್ಲೆಯ 1679 ಫಲಾನುಭವಿಗಳಿಗೆ ಸಹಾಯಧನ ನೀಡಲಾಗುತ್ತಿದೆ ಎಂದರು.
ಡಿಸಿ ಜೆ.ಮಂಜುನಾಥ್, ಸಿಇಒ ಎಚ್.ವಿ. ದರ್ಶನ್ ಹಾಜರಿದ್ದರು.