ಜೀತದಾಳುಗಳಿಗೆ ಬಿಡುಗಡೆ ಪತ್ರ ಕೊಡುವಂತೆ ಪ್ರತಿಭಟನೆ

IMG-20250205-WA0014
Published on

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಜೀತದಾಳುಗಳಿಗೆ ಬಿಡುಗಡೆ ಪತ್ರವನ್ನು ನೀಡುವಂತೆ ಒತ್ತಾಯಿಸಿ ರೂಟ್ಸ್ ಫಾರ್ ಫ್ರೀಡಂ ಸಂಘಟನೆ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಅಲ್ಲಿಂದ ಮೆರವಣಿಗೆ ಹೊರಟು ಶ್ರೀ ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಸಾಗಿ ಜಿಲ್ಲಾಡಳಿತ ಭವನದ ಮುಂಭಾಗ ಕೆಲಕಾಲ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ಜಿ.ಕೆ.ಕುನ್ನವಲಯ್ಯ ಮಾತನಾಡಿ, ಗುಂಡ್ಲುಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ನಮ್ಮ ಸಂಘಟನೆ ವತಿಯಿಂದ 2014 ನೇ ಸಾಲಿನಲ್ಲಿ 53 ಜನ ಜೀತದಾಳುಗಳನ್ನು ಗುರುತಿಸಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಲಾಗಿತ್ತು. ಜಿಲ್ಲಾಧಿಕಾರಿಗಳ ಮೂಲಕ ತನಿಖಾ ತಂಡ ರಚನೆ ಮಾಡಿ, ವಿಚಾರಣೆ ನಡೆಸಿ ಜೀತದಾಳುಗಳೆಂದು ಪರಿಗಣಿಸಿ ವರದಿ ಮಾಡಲಾಗಿದೆ ಎಂದು ತಿಳಿಸಿದರು.

ಅದಲ್ಲದೇ ಅಪರ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಅವರು ನೇತೃತ್ವದಲ್ಲಿ ಮೂರು ಬಾರಿ ವಿಚಾರಣೆ ನಡೆಸಿ 53 ಜನ ಜೀತದಾಳುಗಳು ಎಂದು ಗುರುತಿಸಲಾಗಿದೆ. ಈ ಕುರಿತು ಹಲವಾರು ಬಾರಿ ಜಿಲ್ಲಾಧಿಕಾರಿಗಳ ಗಮನಕ್ಕೂ ತಂದರೂ ಇವರಿಗೆ ಜೀತ ಬಿಡುಗಡೆ ಪತ್ರವನ್ನು ವಿತರಣೆ ಮಾಡಿಲ್ಲ. ಈ 53 ಜನರು ಜೀತ ಬಿಟ್ಟಿದ್ದು, ಇವರನ್ನು ಯಾರು ಸಹ ಕೂಲಿಗೆ ಕರೆಯುತ್ತಿಲ್ಲ. ಆಗಾಗಿ ಕೂಡಲೇ ಅವರಿಗೆ ಜೀತಮುಕ್ತ ಬಿಡುಗಡೆ ಪತ್ರವನ್ನು ನೀಡಬೇಕು, ಪುನರ್ವಸತಿಯನ್ನು ಕಲ್ಪಿಸಿಕೊಡಬೇಕು. ಫೆ.9 ರಂದು ಜೀತ ಮುಕ್ತ ದಿನಾಚರಣೆ ಮಾಡುವ ಸಂದರ್ಭದಲ್ಲಿ ಇವರಿಗೆ ಬಿಡುಗಡೆ ಪತ್ರ ನೀಡಲಿಲ್ಲವಾದರೇ, ಅಂದು ಕಪ್ಪು ಪಟ್ಟಿ ಪ್ರದರ್ಶನ ಮಾಡಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಂಘದ ಸಂಚಾಲಕ ಗಂಗ ಹನುಮಯ್ಯ, ರಾಚಯ್ಯ, ಗುರು ಮಲ್ಲಪ್ಪ, ದೊಡ್ಡಯ್ಯ, ವೆಂಕಟರಮಣ, ಕರಿಯಯ್ಯ, ದೇವ ಸುಂದರಿ, ಕಾಳಮ್ಮ ಹಾಗೂ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net