ಜಿಲ್ಲೆಯಾದ್ಯಂತ ಸಿದ್ದಗಂಗಾಶ್ರೀಗಳ ಜಯಂತಿ

Published on

ಚಾಮರಾಜನಗರ: ತುಮಕೂರಿನ ಸಿದ್ಧಗಂಗಾ ಮಠದ ಡಾ.ಶಿವಕುಮಾರಸ್ವಾಮೀಜಿ ಅವರ 118ನೇ ಜನ್ಮದಿನಾಚರಣೆಯನ್ನು ಜಿಲ್ಲಾದ್ಯಂತ ಅನ್ನ ದಾಸೋಹ ಹಾಗೂ ಇನ್ನಿತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಇಂಚರ ಉಪಹಾರ ಕೇಂದ್ರದ ವತಿಯಿಂದ ಶ್ರೀಗಳ ಜಯಂತಿಯ ಅಂಗವಾಗಿ ಮಂಗಳವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯ ವರೆಗೂ ನಿರಂತರವಾಗಿ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಡಾ.ಶ್ರೀಶಿವಕುಮಾರಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದ ಬಳಿಕ ನೆರೆದ ಭಕ್ತರಿಗೆ ತಿಂಡಿ, ಊಟ ಹಾಗೂ ಪಾನಕ-ಮಜ್ಜಿಗೆಯನ್ನು ವಿತರಣೆ ಮಾಡಲಾಯಿತು. ಜಿಲ್ಲಾಡಳಿತ ಭವನದ ನೌಕರವರ್ಗ, ಪೊಲೀಸರು, ವಿದ್ಯಾರ್ಥಿಗಳು ಹಾಗೂ ಸಾವಿರಾರು ಸಾರ್ವಜನಿಕರು ಪ್ರಸಾದವನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಇಂಚರ ಉಪಹಾರ ಕೇಂದ್ರದ ಮಾಲೀಕ ಕೆ.ಜಿ.ಮಂಜುನಾಥ್ ಮಾತನಾಡಿ, ತುಮಕೂರಿನ ಸಿದ್ಧಗಂಗಾ ಮಠದ ಡಾ.ಶ್ರೀಶಿವಕುಮಾರಸ್ವಾಮೀಜಿ ಅವರ ಆಧುನಿಕ ಜಗತ್ತಿಗೆ ತ್ರಿವಿಧ ದಾಸೋಹದ ಮಹತ್ವವನ್ನು ಸಾರಿದರು. ಅನ್ನ, ಅಕ್ಷರ, ಆರೋಗ್ಯವನ್ನು ಲಕ್ಷಾಂತರ ಬಡಮಕ್ಕಳಿಗೆ ನೀಡುವ ಮೂಲಕ ಅವರ ಬಾಳಿಗೆ ಬೆಳಕಾಗಿದ್ದಾರೆ. ಅವರ ಆದರ್ಶಮಯ ಬದುಕು ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕಿದೆ ಎಂದರು.

ಪ್ರತಿವರ್ಷವೂ ಶ್ರೀಗಳು ಜಯಂತಿಯ ಅಂಗವಾಗಿ ನಿರಂತರ ದಾಸೋಹ ವ್ಯವಸ್ಥೆಯನ್ನು ಆಯೋಜಿಸಲಾಗುತ್ತಿದೆ. ಅದರಂತೆ ಈ ವರ್ಷವೂ 1500 ಜನರಿಗೆ ತಿಂಡಿ ಹಾಗೂ 3500 ಜನರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಮೂಲಕ ಅವರನ್ನು ಸ್ಮರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಇಂಚರ ಉಪಹಾರ ಕೇಂದ್ರದ ನಾಗರತ್ನಮ್ಮ, ಈಶ್ವರ್ ರಕ್ಷಿತ್, ಇಂಚರ, ಉಮಾ, ಪ್ರಕಾಶ್, ರಾಧಾಕೃಷ್ಣ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಪಾನಕ-ಮಜ್ಜಿಗೆ ವಿತರಣೆ:

ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ಶ್ರೀಸಿದ್ದಮಲ್ಲೇಶ್ವರ ವಿರಕ್ತ ಮಠದ ಮುಂಭಾಗ ಕರ್ನಾಟಕ ರತ್ನ, ತ್ರಿವಿಧ ದಾಸೋಹಿ ಡಾ.ಶ್ರೀಶಿವಕುಮಾರಸ್ವಾಮೀಜಿ ದಿನಾಚರಣೆ ಅಂಗವಾಗಿ ಪಾನಕ-ಮಜ್ಜಿಗೆಯನ್ನು ವಿತರಣೆ ಮಾಡಲಾಯಿತು. ತಾಲೂಕಿನ ವಿ.ಸಿ.ಹೋಸೂರು ಗ್ರಾಮದಲ್ಲಿ ಡಾ.ಶ್ರೀಶಿವಕುಮಾರಸ್ವಾಮೀಜಿ ಅವರ 118ನೇ ಜಯಂತೋತ್ಸವದ ಅಂಗವಾಗಿ ಶ್ರೀಗಳ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ನೆರೆದಿದ್ದ ಭಕ್ತರಿಗೆ ಮಜ್ಜಿಗೆ-ಪಾನಕ ವಿತರಣೆ ಮಾಡಲಾಯಿತು. ಗ್ರಾಮಸ್ಥರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಪ್ರಸಾದ ವಿನಿಯೋಗ:

ಕೊಳ್ಳೇಗಾಲ ಪಟ್ಟಣದ ಸರ್ಕಾರಿ ಶ್ರೀಮಹದೇಶ್ವರ ಪ್ರಥಮ ದರ್ಜೆ ಕಾಲೇಜು ರಸ್ತೆಯಲ್ಲಿರುವ ಶ್ರೀಶಿವಕುಮಾರ ಸ್ವಾಮೀಜಿ ವೃತ್ತ, ವಾಟರ್ ಟ್ಯಾಂಕ್ ಹತ್ತಿರ ಇರುವ ಶ್ರೀಶಿವಕುಮಾರ ಸ್ವಾಮೀಜಿ ಸ್ವಸಹಾಯ ಸಂಘದ ವತಿಯಿಂದ ಶ್ರೀಶಿವಕುಮಾರ ಸ್ವಾಮೀಜಿಯವರ 118ನೇ ಜಯಂತಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕೊಳ್ಳೇಗಾಲ ದಾಸೋಹ ಮಠದ ಶ್ರೀಶಿವಪ್ಪಸ್ವಾಮೀಜಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಬಳಿಕ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಸಂಘದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net