ಜಿಲ್ಲೆಯಾದ್ಯಂತ ಸಡಗರದ ಕ್ರಿಸ್‌ಮಸ್ ಆಚರಣೆ

oplus_0
oplus_0
Published on

ಚಾಮರಾಜನಗರ: ಜಿಲ್ಲೆಯಾದ್ಯಂತ ಕ್ರೈಸ್ತ ಬಾಂಧವರು ಸಡಗರ, ಸಂಭ್ರಮದಿಂದ ಕ್ರಿಸ್‌ಮಸ್ ಹಬ್ಬವನ್ನು ಆಚರಣೆ ಮಾಡಿದರು.

ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ, ಹನೂರು, ಯಳಂದೂರು ಹಾಗೂ ಗುಂಡ್ಲುಪೇಟೆ ತಾಲೂಕಿನಾದ್ಯಂತ ಇರುವ ಚರ್ಚ್‌ಗಳಿಗೆ ಭೇಟಿ ನೀಡಿ ಏಸುಕ್ರಿಸ್ತನಿಗೆ ಸಾಮಾಹಿಕ ಪ್ರಾರ್ಥನೆ ಸಲ್ಲಿಸಿದರು. ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು, ಕೇಕ್ ವಿತರಿಸುವ ಮೂಲಕ ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು. ಕ್ಯಾಥೋಲಿಕ್ ಚರ್ಚ್‌ಗಳಲ್ಲಿ ಮಂಗಳವಾರ ರಾತ್ರಿಯಿಂದಲೇ ವಿವಿಧ ಪೂಜೆ ಕೈಂಕರ್ಯಗಳನ್ನು ಸಲ್ಲಿಸಲಾಯಿತು.

ಚರ್ಚ್ ಆವರಣದಲ್ಲಿ ಗೋದಲಿ ರಚಿಸಿ, ಬಾಲ ಏಸುವನ್ನು ಇರಿಸಿ ಪ್ರಾರ್ಥನೆ ಸಲ್ಲಿಸಲಾಗಿತ್ತು. ಇನ್ನು ಪ್ರಾಟಸ್ಟೆಂಟ್ ಪಂಥದವರು ಕಳೆದ ಒಂದು ತಿಂಗಳಿನಿಂದಲೂ ಮನೆಮನೆಗಳಲ್ಲಿ ಭಜನೆ ನಡೆಸಿದ್ದರು. ಕ್ರಿಸ್‌ಮಸ್ ದಿನವಾದ ಬುಧವಾರ ಪ್ರಾಟಸ್ಟೆಂಟ್ ಚರ್ಚ್‌ಗಳಲ್ಲಿ ಗಾಯನ, ದಿವ್ಯಬಲಿಪೂಜೆ ನೆರವೇರಿಸಲಾಯಿತು. ಪರಸ್ಪರರು ಶುಭಾಸಯಗಳನ್ನು ವಿನಿಮಯ ಮಾಡಿಕೊಂಡು, ಕ್ರಿಸ್‌ಮಸ್ ಕೇಕ್‌ಗಳನ್ನು ಹಂಚಲಾಯಿತು. ಕ್ರಶ್ಚಿಯನ್ನರ ಮನೆಗಳಲ್ಲಿ ಹಬ್ಬದ ವಾತಾವರಣ ಮನೆಮಾಡಿತ್ತು. ಮಕ್ಕಳು, ಮಹಿಳೆಯರು, ಹೊಸಬಟ್ಟೆಗಳನ್ನು ತೊಟ್ಟು ಸಂಭ್ರಮಿಸಿದರು. ಮನೆಗೆ ಸ್ನೇಹಿತರು, ಸಂಬಂಧಿಕರು, ಆಪ್ತರನ್ನು ಆಹ್ವಾನಿಸಿ ಹಬ್ಬದ ಭೋಜನವನ್ನು ಸವಿದರು.

ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ಸಂತಪೌಲರ ದೇವಾಯ, ಸತ್ತಿರಸ್ತೆಯಲ್ಲಿರುವ ಸಿಎಸ್‌ಐ ಚರ್ಚ್, ಕರಿನಂಜನಪುರ ರಸ್ತೆಯಲ್ಲಿರುವ ಕ್ರೈಸ್ತ ದೇವಾಲಯ ಮತ್ತು ತಾಲೂಕಿನ ನಾಗವಳ್ಳಿ, ಚಂದಕವಾಡಿ, ಸರಗೂರು, ದೊಡ್ಡರಾಯಪೇಟೆ, ಮಾದಾಪುರ, ಮಸಗಾಪುರ, ಭೋಗಾಪುರ, ಕೋಡಿಉಗನೆ ಹಾಗೂ ಇನ್ನಿತರೆ ಗ್ರಾಮಗಳ ಚರ್ಚ್‌ಗಳಲ್ಲಿ ಕ್ರಿಶ್ಚಿಯನ್ನರು ವಿಶೇಷ ಪ್ರಾರ್ಥನೆ ನೆರವೇರಿಸಿ ಸಡಗರ ಸಂಭ್ರಮದಿಂದ ಕ್ರಿಸ್‌ಮಸ್ ಆಚರಣೆ ಮಾಡಿದರು.

ಚರ್ಚ್‌ಗಳಿಗೆ ಶಾಸಕರ ಪುತ್ರಭೇಟಿ:

ಕ್ರಿಸ್‌ಮಸ್ ಅಂಗವಾಗಿ ತಾಲೂಕಿನ ವಿವಿಧ ಚರ್ಚ್‌ಗಳಿಗೆ ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಪುತ್ರ ಯಳಂದೂರು ಟಿಎಪಿಸಿಎಂಎಸ್ ಅಧ್ಯಕ್ಷ ಕುಸುಮರಾಜು ಭೇಟಿನೀಡಿ ಕ್ರೈಸ್ತ ಬಾಂಧವರಿಗೆ ಶುಭಾಶಯ ಕೋರಿದರು. ನಗರದ ಸಿಎಸ್‌ಐ, ರಾಮಸಮುದ್ರ ಮಸಗಾಪುರ ಬಿಷಪ್ ಸಾರ್ಜೆಂಟ್ ಸ್ಮಾರಕ ದೇವಾಲಯ , ದೊಡ್ಡರಾಯಪೇಟೆಯ ಸಂತ ತೆರೆಸಾ ಚರ್ಚ್, ಕೋಡಿಉಗನೆ, ನಾಗವಳ್ಳಿ ಚರ್ಚ್‌ಗಳಿಗೆ ಭೇಟಿನೀಡಿದರು. ಅಲ್ಲಿನ ಧರ್ಮಗುರುಗಳನ್ನು ಭೇಟಿಮಾಡಿ, ಶಾಂತಿ, ಅಹಿಂಸೆ,ಕರುಣೆಯಂತಹ ಮಾನವೀಯತೆ ಗುಣಗಳನ್ನು ಜಗತ್ತಿಗೆ ಸಾರಿದ ಮಹಾನ್ ಮಾನವತಾವಾದಿ ಏಸುಕ್ರಿಸ್ತನು ಹುಟ್ಟಿದ ಶ್ರೇಷ್ಟ ದಿನವಾಗಿದೆ. ಕ್ರಿಸ್ ಮಸ್ ನಂತರ ಬರುವ 2025 ನೇ ನೂತನ ವರ್ಷ ನಾಡಿನ ಜನತೆಗೆ ಒಳಿತನ್ನುಂಟು ಮಾಡಿ ಉತ್ತಮ ಮಳೆ-ಬೆಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು. ಈಸಂದರ್ಭದಲ್ಲಿ ತಾ.ಪಂ ಮಾಜಿ ಸದಸ್ಯ ರಾಜು ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net