ಜಿಲ್ಲೆಯಾದ್ಯಂತ ಶ್ರದ್ಧಾಭಕ್ತಿಯಿಂದ ರಂಜಾನ್ ಆಚರಣೆ

Published on

ಚಾಮರಾಜನಗರ: ಜಿಲ್ಲೆಯಾದ್ಯಂತ ಮುಸ್ಲಿಂರ ಪವಿತ್ರ ರಂಜಾನ್ ಹಬ್ಬವನ್ನು ಸಂಭ್ರಮ- ಸಡಗರದೊಂದಿಗೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ, ಹನೂರು, ಗುಂಡ್ಲುಪೇಟೆ ಹಾಗೂ ಯಳಂದೂರು ತಾಲೂಕಿನ ವ್ಯಾಪ್ತಿಯಲ್ಲಿ ಇರುವ ಈದ್ಗಾ ಮೈದಾನಕ್ಕೆ ಬೆಳಗಿನ ಸಮಯದಲ್ಲಿ ತೆರಳಿದ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ನೆರವೇರಿಸುವ ಮೂಲಕ ತ್ಯಾಗ ಮತ್ತು ಶಾಂತಿಯ ಸಂಕೇತವಾದ ರಂಜಾನ್ ಹಬ್ಬವನ್ನು ಆಚರಿಸಿದರು. ಮುಸ್ಲಿಂ ಧರ್ಮ ಗುರುಗಳು ಈ ಸಂದರ್ಭದಲ್ಲಿ ರಂಜಾನ್ ಸಂದೇಶವನ್ನು ಸಾರಿದರು. ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೂಲಕ ಹರ್ಷ ವ್ಯಕ್ತಪಡಿಸಿದರು. ಸುಮಾರು 30 ದಿನಗಳ ಉಪವಾಸದ ಬಳಿಕ ಚಂದ್ರನ ದರ್ಶನ ಪಡೆದ ಮುಸ್ಲಿಂ ಸಾಮೂಹಿಕ ಪ್ರಾರ್ಥನೆಯೊಂದಿಗೆ ಹಬ್ಬವನ್ನು ಸಂಭ್ರಮಿಸಿದರು.

ಹಬ್ಬದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಮಕ್ಕಳು, ಸ್ನೇಹಿತರು ಮತ್ತು ಸಂಬಂಧಿಗಳ ಜತೆ ಮಸೀದಿಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಹೊಸ ಬಟ್ಟೆಗಳನ್ನು ತೊಟ್ಟು ಮಕ್ಕಳು ಸಂಭ್ರಮಿಸಿದರು. ಸಾಮೂಹಿಕ ಪ್ರಾರ್ಥನೆಯ ನಂತರ ಸಮುದಾಯದ ಎಲ್ಲರೂ ಮೆರವಣಿಗೆ ನಡೆಸಿದರು. ಮುಸ್ಲಿಂ ಸಮುದಾಯದಲ್ಲಿ ಆರ್ಥಿಕವಾಗಿ ಸದೃಢರಾಗಿರುವವರು ಬಡವರಿಗೆ ದಾನ ಮಾಡುವ ಮೂಲಕ ಶ್ರದ್ದಾ, ಭಕ್ತಿ ಮೆರೆದರು. ಹಬ್ಬದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಾದ್ಯಂತ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

ಮನೆ ಮಾಡಿದ ಸಂಭ್ರಮ:

ನಗರದ ಪಾಲಿಟೆಕ್ನಿಕ್ ಕಾಲೇಜಿನ ಸಮೀಪದಲ್ಲಿರುವ ಈದ್ಗಾ ಮೈದಾನ, ಸೋಮವಾರಪೇಟೆ ಬಳಿ ಇರುವ ಈದ್ಗಾ ಮೈದಾನದಲ್ಲಿ ರಂಜಾನ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಗರದ ವಿವಿಧ ಬಡಾವಣೆಗಳಲ್ಲಿ ರಂಜಾನ್ ಹಬ್ಬದ ಸಂಭ್ರಮ ಮನೆ ಮಾಡಿತ್ತು. ತಾಲೂಕಿನ ಚಂದಕವಾಡಿ, ನಾಗವಳ್ಳಿ, ಸರಗೂರು, ಕಾಗಲವಾಡಿ, ಹರದನಹಳ್ಳಿ ಹಾಗೂ ಇನ್ನಿತರೆ ಗ್ರಾಮಗಳಲ್ಲೂ ಮುಸ್ಲಿಂ ಸಮುದಾಯದವರು ಈದ್ಗಾ ಮೈದಾನಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಕಪ್ಪು ಧರಿಸಿ ಪ್ರಾರ್ಥನೆ:

ನಗರದ ಸತ್ತಿ ರಸ್ತೆಯ ಈದ್ಗಾ ಮೈದಾನ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಬಳ್ಿ ಇರುವ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಕಪ್ಪು ಪಟ್ಟಿ ಧರಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ವಕ್ಫ ಬಿಲ್, ಎಂ.ಕೆ.ಫೈಜಿ ಬಂಧನ ಮತ್ತು ಪ್ಯಾಲೆಸ್ಟೈನ್ ಮೇಲೆ ನಡೆಯುತ್ತಿರುವ ಯುದ್ಧವನ್ನು ವಿರೋಧಿಸಿ ಸಾಂಕೇತಿಕವಾಗಿ ಕಪ್ಪುಪಟ್ಟಿ ಧರಿಸಿ ಪ್ರಾರ್ಥನೆ ಸಲ್ಲಿಸಿದರು. ಪಾರ್ಥನೆ ಬಳಿಕ ವಕ್ಫ್ ಮಸೂದೆ ವಾಪಸ್, ಎಂ.ಕೆ.ಫೈಜಿ ಬಿಡುಗಡೆ ಕುರಿತು ಭಿತ್ತಿಪತ್ರಗಳನ್ನು ಪ್ರದರ್ಶನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net