

ಚಾಮರಾಜನಗರ: ಅಣ್ಣ ತಂಗಿಯರ ಭಾತೃತ್ವದ ಭಾವನೆಯನ್ನು ಸಾರುವ ರಕ್ಷಾಬಂಧನ ಹಬ್ಬವನ್ನು ಜಿಲ್ಲೆಯಾದ್ಯಂತ ಸಹೋದರ ಸಹೋದರಿಯರು ಅತ್ಯಂತ ಸಂಭ್ರಮದಿಂದ ಆಚರಿಸಿದರು.
ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು, ಹನೂರು ಹಾಗೂ ಗುಂಡ್ಲುಪೇಟೆ ತಾಲೂಕಿನಾದ್ಯಂತ ರಕ್ಷಾ ಬಂಧನದ ಅಂಗವಾಗಿ ಸಹೋದರಿಯರು ಸಹೋದರನ ಕೈಗೆ ರಾಖಿ ಕಟ್ಟಿ, ಆರತಿ ಬೆಳಗಿ, ಆಶೀರ್ವಾದವನ್ನು ಪಡೆದುಕೊಂಡರು. ಸಹೋದರ ತನ್ನ ಸಹೋದರಿಯನ್ನು ಪ್ರೀತಿಯಿಂದ ಹರಸಿ, ಆಶೀರ್ವದಿಸಿ ಪರಸ್ಪರ ಕಾಳಜಿ, ಸೌಹಾರ್ದತೆ ಭಾವನೆಯನ್ನು ವ್ಯಕ್ತಪಡಿಸಿದರು. ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿವಿ ನಿಲಯದ ಪ್ರಕಾಶಭವನ, ಜೆಎಸ್‌ಎಸ್ ಕಾಲೇಜು, ಸೇವಾಭಾರತಿ ಕಾಲೇಜು, ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿಗಳಲ್ಲಿ ವಿದ್ಯಾರ್ಥಿಗಳು ರಾಖಿಕಟ್ಟಿ ಸಂಭ್ರಮಿಸಿದರು. ಹಾಗೂ ಇನ್ನಿತರೆ ಕಡೆಗಳಲ್ಲಿ ಸಹೋದರ ಸಹೋದರಿಯರು ರಾಖಿಯನ್ನು ಕಟ್ಟುವ ಮೂಲಕ ಅದರ ಮಹತ್ವ ಸಾರಿದರು.
ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ:
ನಗರದ ವಿವಿಧ ಅಂಗಡಿಗಳಲ್ಲಿ ರಕ್ಷಾ ಬಂಧನದ ಅಂಗವಾಗಿ ಮಹಿಳೆಯರು ರಾಖಿಗಳನ್ನು ಖರೀದಿ ಮಾಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ಕೆಲವರು ಕುಟುಂಬ ಸಮೇತರಾಗಿ ಅಂಗಡಿಗೆ ಆಗಮಿಸಿ ತಮಗೆ ಇಷ್ಟವಾದ ರಾಖಿಯನ್ನು ಖರೀದಿಸಿದರು. ಹಲವಾರು ವಿದ್ಯಾರ್ಥಿನಿಯರು ಗುಂಪುಗುಂಪಾಗಿ ಬಂದು ತಮ್ಮ ಸಹೋದರಿಗಾಗಿ ವಿಧವಿಧದ ರಾಖಿಯನ್ನು ಖರೀದಿಸದರು. ಇದರಿಂದಾಗಿ ರಥದ ಬೀದಿಯಲ್ಲಿ ರಾಳಿ ಮಾರಾಟ ಮಾಡುತ್ತಿದ್ದ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರವಾಯಿತು.
ಪ್ರಕಾಶ ಭವನದಲ್ಲಿ ಇಂದು ರಕ್ಷಾ ಬಂಧನ:
ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲದ ಪ್ರಕಾಶ ಭವನದಲ್ಲಿ ಆ.10 ರಂದು ರಕ್ಷಾ ಬಂಧನ ಮಹೋತ್ಸವ ಕಾರ್ಯಕ್ರವನ್ನು ಆಯೋಜಿಸಲಾಗಿದೆ. ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗುವ ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಉದ್ಘಾಟಿಸುವರು. ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಸಾನಿಧ್ಯವಹಿಸುವರು. ರೋಟರಿ ಸಂಸ್ಥೆ ಅಧ್ಯಕ್ಷ ಕಾಗಲವಾಡಿ ಚಂದ್ರು ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.