ಜಿಲ್ಲೆಯಾದ್ಯಂತ ಮುಂದುವರಿದ ಪುಷ್ಯ ಮಳೆ ಅಬ್ಬರ:ಕುಸಿದ ಮನೆಗಳು, ಗುಡ್ಡಗಳು

ಜಿಲ್ಲೆಯಾದ್ಯಂತ ಮುಂದುವರಿದ ಪುಷ್ಯ ಮಳೆ ಅಬ್ಬರ:ಕುಸಿದ ಮನೆಗಳು, ಗುಡ್ಡಗಳು
Published on

 ಹಾಸನ: ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಸಕಲೇಶಪುರ, ಆಲೂರು, ಅರಕಲಗೂಡಿನಲ್ಲಿ ಮಳೆರಾಯನ ಅಬ್ಬರ ಜೋರಾಗಿದೆ. ಮಳೆ ಅಬ್ಬರದಿಂದ ಸಕಲೇಶಪುರ ಹಾಗೂ ಆಲೂರಿನ ಅಲ್ಲಲ್ಲಿ ಭೂ ಕುಸಿತ, ಮನೆ ಕುಸಿತ, ವಿದ್ಯುತ್ ವಿದ್ಯುತ್ ಕಂಬಗಳು ಧರೆಗುರುಳಿದರೆ, ಅರಕಲಗೂಡು ತಾಲೂಕಿನಲ್ಲಿ ಕಾವೇರಿ ಹೊಳೆ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಷ್ಟ ಉಂಟಾಗಿದೆ.

ಸಕಲೇಶಪುರ ತಾಲೂಕಿನಲ್ಲಿ ಮುಂಗಾರು ಮಳೆ ಮುಂದುವರೆದಿದ್ದು ಚತುಷ್ಪಥ ಕಾಮಗಾರಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ 75ರ ದೋಣಿಗಾಲ್ ಸಮೀಪ ಭೂಕುಸಿತ ಸಂಭವಿಸಿದೆ. ಕೊಲ್ಲಹಳ್ಳಿ ಗ್ರಾಮದ ಸಮೀಪ ಹೆದ್ದಾರಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು ಮಳೆ ಮುಂದುವರೆದಲ್ಲಿ ಹೆದ್ದಾರಿ ತುಂಡಾಗುವ ಭಯ ಆವರಿಸಿದೆ. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ರಸ್ತೆ ನಿರ್ಮಾಣಕ್ಕೆಂದು ಅವೈಜ್ಞಾನಿಕವಾಗಿ ಗುಡ್ಡ ಕೊರೆದಿರುವ ಕಡೆ ಅಪಾರ ಪ್ರಮಾಣದ ಮಣ್ಣು ಕುಸಿಯುತ್ತಿದೆ. ಮಣ್ಣಿನ ಜತೆಗೆ ದೊಡ್ಡ ದೊಡ್ಡ ಮರಗಳು ಕೆಳಗುರುಳುತ್ತಿರುವುದರಿಂದ ಆತಂಕ ಮನೆ ಮಾಡಿದೆ. ಭಾರೀ ಪ್ರಮಾಣದಲ್ಲಿ ರಸ್ತೆ ಮೇಲೆ ಕುಸಿದು ಬೀಳುತ್ತಿರುವ ಮಣ್ಣನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗುತ್ತಿದೆ.

ತಾಲೂಕಿನ ರಕ್ಷಿದಿ ಗ್ರಾಮದಲ್ಲಿ ಪ್ರಸಾದ್ ರಕ್ಷಿದಿ ಎಂಬುವವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಮನೆ ಹಾನಿಯಾಗಿದೆ. ಹಾಗೆಯೇ ಹಾನುಬಾಳು ಹೋಬಳಿ, ಚಿಮ್ಮಿಕೋಲು ಗ್ರಾಮದಲ್ಲಿ ಮನೆಯ ಬಳಿಯ ಗೆರೆ ಕುಸಿತಗೊಂಡಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಚಳ್ಳ ಹಾಡ್ಯ ಬಳಿ ರಸ್ತೆಗೆ ಗುಡ್ಡ ಕುಸಿದು ಹಳ್ಳಿಬೈಲು, ಹಳ್ಳಿಬೈಲು ಕಾಲೋನಿ, ದಿನೇಕೆರೆ-ಹೆತ್ತೂರು ಮಾರ್ಗದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಭಾರೀ ಮಳೆಗೆ ಬನವಾಸೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಂಪೌಂಡ್ ಕುಸಿದು ಬಿದ್ದಿದ್ದು, ಶಾಲೆಗೆ ರಜೆ ಇದ್ದುದ್ದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ಮರಗಿಡಿ ಗ್ರಾಮದಲ್ಲಿ ಕಮಲಮ್ಮ, ಗೌರಮ್ಮ ಎಂಬುವವರಿಗೆ ಸೇರಿದ ಎರಡು ವಾಸದ ಮನೆಗಳ ಮೇಲೆ ಗುಡ್ಡ ಕುಸಿದು ಮನೆ ಹಾನಿಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸಕಲೇಶಪುರ ಪಟ್ಟಣದ, ಚಂಪಕನಗರದಲ್ಲಿ ಸಚಿನ್ ಎಂಬುವವರಿಗೆ ಸೇರಿದ ವಾಸದ ಮನೆ ಕುಸಿದುಬಿದ್ದಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಗಾರೆ ಕೆಲಸ ಮಾಡುವ ಸಚಿನ್ ಕೆಲಸಕ್ಕೆ ತೆರಳಿದ್ದರು. ಮನೆಯಲ್ಲಿಯೇ ಇರುತ್ತಿದ್ದ ಸಚಿನ್ ಪತ್ನಿ ಸ್ವಾತಿ ತನ್ನ ಮಗುವಿನೊಂದಿಗೆ ಅಂಗಡಿಗೆ ತೆರಳಿದ್ದರು. ಈ ವೇಳೆ ಮಳೆಗೆ ಏಕಾಏಕಿ ವಾಸದ ಮನೆ ಕುಸಿದು ಬಿದ್ದಿದೆ. ಅಂಗಡಿಗೆ ತೆರಳಿದ್ದರಿಂದ ತಾಯಿ- ಮಗು ಬದುಕುಳಿದಿದ್ದಾರೆ. ಸ್ಥಳಕ್ಕೆ ಪುರಸಭೆ ಸದಸ್ಯೆ ಅನ್ನಪೂರ್ಣಾ, ಆರ್‌ಐ ಮತ್ತು ವಿಎ ಭೇಟಿ, ಪರಿಶೀಲನೆ ನಡೆಸಿದರು.

ಜಮೀನು ಜಲಾವೃತ

ಅರಕಲಗೂಡು ತಾಲೂಕಿನ ತಾಲೂಕಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಗೆ ಜಮೀನುಗಳಲ್ಲಿ ನೀರು ನಿಂತು ಫಸಲು ನಷ್ಟ ಅನುಭವಿಸುವಂತಾಗಿದೆ. ಕಾವೇರಿ ನದಿ ತಟದಲ್ಲಿ ಪ್ರವಾಹ ಉಂಟಾಗಿದ್ದು ಆಸುಪಾಸು ಜಮೀನಿಗೆ ನೀರು ಹರಿದು ಅಪಾಯಕಾರಿ ಮಟ್ಟಕ್ಕೆ ತಲುಪಿದೆ. ತಂಬಾಕು, ಅಡಿಕೆ ತೋಟದ ಬೆಳೆಗಳು ಹಾಳಾಗುತ್ತಿದ್ದು ರೈತರ ಬದುಕು ನೀರು ಪಾಲಾಗುತ್ತಿದೆ.

ಕಟ್ಟೇಪುರ ಅಣೆಕಟ್ಟೆ ಹಿನ್ನೀರು ಉಕ್ಕಿ ಹರಿದು ಬೆಳೆಗಳು ನೀರಿನಲ್ಲಿ ಮುಳುಗಿವೆ. ಕೊಣನೂರು, ರಾಮನಾಥಪುರ, ಬಸವಾಪಟ್ಟಣ, ಬಸವನಹಳ್ಳಿ, ಕೇರಳಾಪುರ, ಬೆಟ್ಟಸೋಗೆ ಭಾಗದಲ್ಲಿ ಕಾವೇರಿ ಕೊಲ್ಲಿ ಭಾಗದಲ್ಲಿ ನೂರಾರು ಎಕರೆ ಬೆಳೆ ಪ್ರವಾಹದ ಹೊಡೆತಕ್ಕೆ ಸಿಲುಕು ನಾಶವಾಗಿದೆ. ಪ್ರಮುಖವಾಗಿ ರೈತರಿಗೆ ಆದಾಯ ತರುವ ತಂಬಾಕು ಬೆಳೆ ಕರಗುತ್ತಿದ್ದು ಬೆಳೆಗಾರರ ಬದುಕು ಮೂರಾಬಟ್ಟೆಯಾಗಿದೆ. ಈ ಬಾರಿ ಮುಂಗಾರು ತಡವಾಗಿದ್ದರೂ ನಿರಂತರ ಮಳೆಯಿಂದಾಗಿ ಬೆಳೆದ ಬೆಳೆಗಳಿಗೆ ಕಂಟಕವಾಗಿದೆ. ಕಾವೇರಿ ಉಕ್ಕೇರಿ ಕೈ ಬಂದ ತುತ್ತು ಬಾಯಿಗೆ ಬಾರದಂತಾಗಿ ಫಸಲು ಹಾಳಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಆಲೂರಿನಲ್ಲಿ ಭಾರಿ ಗಾಳಿ-ಮಳೆ

ಆಲೂರು ತಾಲೂಕಿನಲ್ಲಿ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಗಾಳಿ ಮಳೆಗೆ ಅಲ್ಲಲ್ಲಿ ಅನಾಹುತಗಳು ಸಂಭವಿಸಿದೆ. ಗ್ರಾಮೀಣ ಭಾಗದ ವಿದ್ಯುತ್ ತಂತಿಗಳ ಮೇಲೆ ಮರಗಳು ಮುರಿದು ಬಿದ್ದು ಹಲವು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ವಿದ್ಯುತ್ ತಂತಿಗಳು ಹರಿದು ಬಿದ್ದಿರುವುದರಿಂದ ಗ್ರಾಮೀಣ ಭಾಗದ ಜನರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ. ಪಾಳ್ಯ ಹೋಬಳಿ ಮಡಬಲು ಗ್ರಾಮ ಪಂಚಾಯಿತಿ ಮಂಜಲಗೂಡು ದಾಖಲೆ ಬಸವನಪುರ ಗ್ರಾಮದ ಹೊನ್ನಮ್ಮರವರ ಮನೆ ಹಾಗೂ ತಿಪ್ಪಾಪುರ ಗ್ರಾಮದ ಮಂಜುನಾಥ್ ಅವರ ವಾಸದ ಮನೆ ಸಹ ಬಿದ್ದಿವೆ. ತಾಲೂಕಿನ ಸೆಸ್ಕಾಂ ಇಲಾಖೆಯ ಕಸಬಾ ಶಾಖಾ ವ್ಯಾಪ್ತಿಯಲ್ಲಿ ನಿಲುವಾಗಿಲು ಗ್ರಾಮದಲ್ಲಿ ಹಾಗೂ ಮಗ್ಗೆ ಶಾಖಾ ವ್ಯಾಪ್ತಿಯಲ್ಲಿ ಕಾಡ್ಲೂರು ಕಾಲೋನಿ,ಬಾಳರಕೊಪ್ಪಲು, ನೆರಗಳಲೆ, ಬೆಂಬಳೂರು, ಮಾದಿಹಳ್ಳಿ ಗ್ರಾಮಗಳಲ್ಲಿ ಸುಮಾರು 13 ಕಂಬಗಳು ಅರ್ಧಕ್ಕೆ ಮುರಿದು ಬಿದ್ದಿವೆ. ತಾಲೂಕಿನ 4 ಹೋಬಳಿ ವ್ಯಾಪ್ತಿಯಲ್ಲಿರುವ 15 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮಳೆ ಹಾನಿಗೆ ಸಂಬಂಧಿಸಿದಂತೆ ವರದಿಯನ್ನು ಪಡೆದು ಜಿಲ್ಲಾಧಿಕಾರಿ ಕಚೇರಿ ಕಳಿಸಿಕೊಡಲಾಗಿದೆ ಎಂದು ತಹಶೀಲ್ದಾರ್ ಪ್ರಾಣೇಶ್ ತಿಳಿಸಿದ್ದಾರೆ.

ತಾಲೂಕಿನಲ್ಲಿರುವ ವಾಟೆಹೊಳೆ ಜಲಾಶಯವು 1.51 ಟಿಎಂಸಿ ಸಾಮರ್ಥ್ಯವನ್ನು ಹೊಂದಿದೆ. ಸದ್ಯ ಜಲಾಶಯದಲ್ಲಿ 0.778 ಟಿಎಂಸಿ ನೀರು ಸಂಗ್ರಹವಾಗಿದೆ. 605.85 ಕ್ಯುಸೆಕ್ಸ್ ನೀರು ಒಳ ಹರಿವು ಇದೆ. ಶೇ.50 ರಷ್ಟು ಜಲಾಶಯ ಭರ್ತಿಯಾಗಿದೆ ಎಂದು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಧರ್ಮರಾಜ್ ತಿಳಿಸಿದ್ದಾರೆ.

ಬೇಲೂರಿನಲ್ಲಿ ತಪ್ಪಿದ ದುರಂತ

ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ತಾಲೂಕಿನ ಪಡವಳಲು ಗ್ರಾಮದ ಮಹೇಶ್ ಎಂಬುವವರ ಮನೆ ಸೋಮವಾರ ಕುಸಿದು ಬಿದ್ದಿದೆ. ತಾಲೂಕಿನಾದ್ಯಂತ ನಿರಂತರವಾಗಿ ಮಳೆ ವಿಪರೀತವಾಗಿ ಸುರಿಯುತ್ತಿರುವುದನ್ನು ಗಮನಿಸಿದ ಮನೆಯ ಮಾಲೀಕ ಮಹೇಶ್, ಪತ್ನಿ ಹಾಗೂ ಇಬ್ಬರೂ ಮಕ್ಕಳನ್ನು ಬೇರೆ ಮನೆಗೆ ಕರೆದೊಯ್ದು ವಾಸವಿದ್ದರು. ಹಳೆಯದಾಗಿದ್ದ ಮನೆಯ ಗೋಡೆಗಳು ನಿರಂತರ ಮಳೆಯಿಂದ ನೆನೆದು ಸೋಮವಾರ ಕುಸಿದು ಬಿದ್ದಿದೆ. ಮುನ್ನೆಚ್ಚರಿಕೆಯಿಂದ ಮನೆ ಸದಸ್ಯರು ಬೇರೆಡೆಗೆ ಸ್ಥಳಾಂತರಗೊಂಡಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ ಮನೆಯಲ್ಲಿದ್ದ ಸಣ್ಣಪುಟ್ಟ ಪೀಠೋಪಕರಣಗಳು ಸೇರಿದಂತೆ ಗೃಹೋಪಯೋಗಿ ವಸ್ತುಗಳು ಹಾನಿಗೀಡಾಗಿವೆ. ಘಟನೆ ಸ್ಥಳಕ್ಕೆ ತಹಶೀಲ್ದಾರ್ ಎಂ.ಮಮತಾ ಭೇಟಿ ನೀಡಿ ಪರಿಶೀಲಿಸಿದರು.

ಚನ್ನರಾಯಪಟ್ಟಣದಲ್ಲಿ ಉತ್ತಮ ಮಳೆ

ತಾಲೂಕಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಉತ್ತಮವಾದ ಮಳೆಯಾಗುತ್ತಿದೆ. ಕಸಬಾದಲ್ಲಿ 13.5 ಮಿ.ಮೀ., ಉದಯಪುರದಲ್ಲಿ 27.0 ಮಿ.ಮೀ. ಬಾಗುರಿನಲ್ಲಿ 17.0 ಮಿ.ಮೀ. ನುಗ್ಗೇಹಳ್ಳಿಯಲ್ಲಿ 14.4 ಮಿ.ಮೀ. ಹಿರೀಸಾವೆಯಲ್ಲಿ 15.0ಮಿ.ಮೀ. ಶ್ರವಣಬೆಳಗೊಳದಲ್ಲಿ 20.0 ಮಿ.ಮೀ. ಸೇರಿ ಒಟ್ಟಾರೆಯಾಗಿ ತಾಲೂಕಿನಲ್ಲಿ 123.9 ಮಿ.ಮೀ. ಮಳೆಯಾಗಿದೆ. ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು ಯಾವುದೇ ಅವಘಡಗಳು ಸಂಭವಿಸಿಲ್ಲ.

ಹೊಳೆನರಸೀಪುರದಲ್ಲಿ 27.7 ಮಿ.ಮೀ. ಮಳೆ

ಹೊಳೆನರಸೀಪುರ ತಾಲೂಕಿನಲ್ಲಿ ನಿರಂತರ ಮಳೆಯಾಗಿದ್ದು, ಯಾವುದೇ ಅನಾಹುತಗಳು ಸಂಭವಿಸಿಲ್ಲ. ಬಿಟ್ಟು ಬಿಟ್ಟು ಸೋನೆ ಮಳೆ ಆಗುತ್ತಿದೆ. ತಾಲೂಕಿನಲ್ಲಿ 27.7 ಮಿ.ಮೀ. ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net