

ಚಾಮರಾಜನಗರ: ದೇಶದ ಆರ್ಥಿಕ ಸುಧಾರಣೆಗೆ ತಮ್ಮದೆಯಾದ ಕೊಡುಗೆ ನೀಡಿದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಜಿಲ್ಲೆಯಾದ್ಯಂತ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ, ಹನೂರು, ಗುಂಡ್ಲುಪೇಟೆ ಹಾಗೂ ಹನೂರು ತಾಲೂಕಿನ ವ್ಯಾಪ್ತಿಯಲ್ಲಿ ದೇಶದ ಆರ್ಥಿಕ ತಜ್ಞನಿಗೆ ನುಡಿನಮನಗಳನ್ನು ಸಲ್ಲಿಸಲಾಯಿತು. ವಿವಿಧ ಸಂಘ-ಸಂಸ್ಥೆಗಳು ಹಾಗೂ ಕಾಂಗ್ರೆಸ್ ಕಚೇರಿಗಳಲ್ಲಿ ಡಾ.ಮನಮೋಹನ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ, ಅವರು ದೇಶದ ಅಭಿವೃದ್ಧಿಗೆ ನೀಡಿದ ಕೊಡುಗೆಗಳನ್ನು ಸ್ಮರಣೆ ಮಾಡಲಾಯಿತು. ಈ ಮೂಲಕ ಅಗಲಿದ ಚೇತನಕ್ಕೆ ಗೌರವನ್ನು ಸಲ್ಲಿಸಲಾಯಿತು. ಹಲವಾರು ರಾಜಕೀಯ ಮುಖಂಡರು ಭಾರತದ ಉದಾರ ಆರ್ಥಿಕತೆಯ ವಾಸ್ತುಶಿಲ್ಪಿಯ ಸೇವೆಯನ್ನು ನೆನೆಯುವ ಮೂಲಕ ನಮನ ಸಲ್ಲಿಸಿದರು. ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಆರ್ಥಿಕ ಚಿಕಿತ್ಸಕನ ಭಾವಚಿತ್ರಗಳನ್ನು ಹಾಕಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದರು.
ದೇಶದ ಅಭಿವೃದ್ಧಿಗೆ ಭದ್ರಬುನಾದಿ:
ಭಾರತದಲ್ಲಿ ಎರಡು ಅವಧಿಗೆ ಪ್ರಧಾನ ಮಂತ್ರಿಗಳಾಗೆ ಸೇವೆಸಲ್ಲಿಸಿದ್ದ ಡಾ.ಮನಮೋಹನ್ ಸಿಂಗ್ ಅವರು ಉತ್ತಮ ಆಡಳಿತ ನಡೆಸುವ ತೆಗೆ, ದೇಶದ ಸಮಗ್ರ ಅಭಿವೃದಿಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟರು ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್ ಸ್ಮರಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಿಧನದ ಗೌರವಾರ್ಥ ಶುಕ್ರವಾರ ನಡೆದ ಶ್ರದ್ದಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ದೇಶದ ಸಮಗ್ರ ಅಭಿವೃದ್ಧಿ ಹಾಗೂ ಆರ್ಥಿಕ ಬೆಳವಣಿಗೆಗೆ ಉತ್ತಮವಾದ ಆರ್ಥಿಕ ನೀತಿಯನ್ನು ರೂಪಿಸಿ, ಭಾರತವನ್ನು ಎತ್ತರಕ್ಕೆ ಬೆಳೆಸಿದ ಕೀರ್ತಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಸಲ್ಲುತ್ತದೆ. ಆರ್ಥಿಕ ತಜ್ಞರಾಗಿದ್ದ ಮನಮೋಹನ್ ಸಿಂಗ್ ಅವರು ದೇಶದ ರೈತಾಪಿ ಹಾಗೂ ದುಡಿಯುವ ವರ್ಗಗಳಿಗೆ ಅನುಕೂಲವಾಗುವಂತಹ ಬಹಳಷ್ಟು ಯೋಜನೆಗಳನ್ನು ರೂಪಿಸಿದ್ದರು. ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಶಿಕ್ಷಣದ ತೆಗೆ ಮಧ್ಯಾಹ್ನ ಬಿಸಿಯೂಟ ಮತ್ತು ಸರ್ವ ಶಿಕ್ಷಣಾ ಅಭಿಯಾನ ಆರಂಭಿಸಿದ್ದರು. ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಯನ್ನು ಜಾರಿ ಮಾಡಿ, ದುಡಿಯುವ ವರ್ಗಗಳಿಗೆ ಉದ್ಯೋಗ ಕಲ್ಪಿಸಿಕೊಟ್ಟರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ಗುರುಸ್ವಾಮಿ, ಮಹಮದ್ ಅಸ್ಗರ್, ಜಿಲ್ಲಾ ವಕ್ತಾರ ಕೆರೆಹಳ್ಳಿ ನವೀನ್, ಎಪಿಎಂಸಿ ಮಾಜಿ ಅಧ್ಯಕ್ಷ ಸೋಮೇಶ್, ಕಾಗಲವಾಡಿ ಚಂದ್ರು, ಮುಖಂಡ ಮಹೇಶ್ ಕುದರ್, ಹೆಬ್ಬಸೂರು ರಂಗಸ್ವಾಮಿ, ನಗರಸಭೆ ಸದಸ್ಯೆ ಚಿನ್ನಮ್ಮ, ಶಿವಮೂರ್ತಿ, ಸಿ.ಕೆ.ಮಂಜುನಾಥ್, ಪುಟ್ಟಸ್ವಾಮಿ, ಎಸ್.ರಾಜು, ಎನ್.ಮಹದೇವಸ್ವಾಮಿ, ದೊಡ್ಡರಾಯಪೇಟೆ ಕುಮಾರ್ ಇನ್ನಿತರರು ಹಾಜರಿದ್ದರು.